ಅಜೆಕಾರು: ಜಾನುವಾರು ಅಕ್ರಮ ಸಾಗಟ, ಬೆನ್ನಟ್ಟಿದ ಪೊಲೀಸರು- ಕಾರು ಮರಕ್ಕೆ ಡಿಕ್ಕಿ
ಅಜೆಕಾರು ಸೆ.20 (ಉಡುಪಿ ಟೈಮ್ಸ್ ವರದಿ): ಹಿಂಸಾತ್ಮಕವಾಗಿ ಜಾನುವಾರು ತುಂಬಿಸಿ ಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಕಾರನ್ನು ತಡೆದ ಪೊಲೀಸರು 2 ಜಾನುವಾರುಗಳನ್ನು ರಕ್ಷಿಸಿರುವ ಘಟನೆ ಶಿರ್ಲಾಲಿನ ಅಸ್ವಾ ಆಬಾ ಜುಮ್ಮಾ ಮಸೀದಿ ಬಳಿ ನಡೆದಿದೆ. ಈ ವೇಳೆ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಸೆ.19 ರಂದು ಅಜೆಕಾರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುದರ್ಶನ ದೊಡಮನಿ ಅವರು ಶಿರ್ಲಾಲು ಗ್ರಾಮದ ಪರಿಸರದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯದಲ್ಲಿ, ಜಾನುಯಾರುಗಳನ್ನು ಕಾರಿನಲ್ಲಿ ಹಿಂಸಾತ್ಮಕವಾಗಿ ತುಂಬಿಸಿ ಅಕ್ರಮ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಶಿರ್ಲಾಲು ಗುಡ್ಡೆಯಂಗಡಿ ಕ್ರಾಸ್ ಬಳಿ ಇತರ ಸಿಬ್ಬಂದಿಗಳೊಂದಿಗೆ ಅಂಡಾರು ಕಡೆಯಿಂದ ಬರುತ್ತಿದ್ದ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಸಂಜೆ 7 ಗಂಟೆ ಸುಮಾರಿಗೆ ಅಂಡಾರು ಕಡೆಯಿಂದ ಅತೀ ವೇಗವಾಗಿ ಬರುತ್ತಿದ್ದ ಕಾರನ್ನು ನಿಲ್ಲಿಸಲು ಸೂಚಿಸಿದಾಗ, ಚಾಲಕ ಕಾರನ್ನು ನಿಲ್ಲಿಸದೆ ಜಾರ್ಕಳ ಮುಂಡ್ಲಿ ಕಡೆಗೆ ಚಲಾಯಿಸಿ ಹೋಗಿದ್ದಾನೆ. ತಕ್ಷಣ ಪೊಲೀಸರು ಇಲಾಖಾ ಜೀಪಿನಲ್ಲಿ ಕಾರನ್ನು ಬೆನ್ನಟ್ಟಿ ಹೋಗಿದ್ದು, ಆರೋಪಿತರ ಕಾರು ಶಿರ್ಲಾಲಿನ ಅಸ್ವಾ ಆಬಾ ಜುಮ್ಮಾ ಮಸೀದಿ ಬಳಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿದ್ದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳದಲ್ಲಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕಾಲಿನಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡಿದ್ದ 10,000 ರೂ. ಮೌಲ್ಯದ 2 ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದಾರೆ. ಆರೋಪಿತರು ಈ ಜಾನುವಾರನ್ನು ಎಲ್ಲಿಯೋ ಕಳವು ಮಾಡಿ ಕಾರಿನಲ್ಲಿ ಹಿಂಸಾತ್ಮಕವಾಗಿ ತುಂಬಿಸಿ ಅವುಗಳನ್ನು ಕಸಾಯಿ ಖಾನೆಗೆ ಇಲ್ಲವೇ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದರು ಎಂಬುದಾಗಿ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.