ವಿಡಿಯೊದಲ್ಲಿರುವುದು ನಾನಲ್ಲ: ಡಿ.ವಿ. ಸದಾನಂದ ಗೌಡ ಟ್ವಿಟ್

ಬೆಂಗಳೂರು: ‘ನನ್ನನ್ನು ಹೋಲುವ ರೀತಿಯಲ್ಲಿ ಸೃಷ್ಟಿಸಿರುವ (ಮಾರ್ಫ್‌) ನಕಲಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನನ್ನ ನಿಷ್ಕಳಂಕ ವ್ಯಕ್ತಿತ್ವವನ್ನು ಹಾಳು ಮಾಡಲು ನನ್ನ ವಿರೋಧಿಗಳು ಇದನ್ನು ನಿರ್ಮಿಸಿದ್ದಾರೆ. ಆ ವಿಡಿಯೊದಲ್ಲಿ ಇರುವುದು ನಾನಲ್ಲ’ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

ತಮ್ಮ ಟ್ವಿಟರ್‌ ಹಾಗೂ ಫೇಸ್‌ ಬುಕ್‌ ಖಾತೆಗಳ ಮೂಲಕ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ನಾನು ಈಗಾಗಲೇ ಸೈಬರ್ ಅಪರಾಧ ವಿಭಾಗದ ಪೊಲೀಸರಿಗೆ ದೂರು ನೀಡಿದ್ದೇನೆ. ಅಪರಾಧಿಗಳನ್ನು ಶೀಘ್ರವೇ ಬಂಧಿಸಲಾಗುತ್ತದೆ ಎಂಬ ನಂಬಿಕೆ ನನಗಿದೆ’ ಎಂದು ತಿಳಿಸಿದ್ದಾರೆ.

‘ಈ ವಿಷಯದಲ್ಲಿ ನಾನು ಈಗಾಗಲೇ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆಯನ್ನು ಪಡೆದಿರುವೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿ ವಿಷಯವನ್ನು ಫಾರ್ವರ್ಡ್‌ ಮಾಡುವವರು ಮತ್ತು ಅಪ್‌ಲೋಡ್‌ ಮಾಡುವವರು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗುತ್ತಾರೆ. ಆ ರೀತಿ ಮಾಡುವ ಯಾರಾದರೂ ನಿಮಗೆ ತಿಳಿದಿದ್ದರೆ ನನಗೆ ಮಾಹಿತಿ ನೀಡಿ’ ಎಂದು ಮನವಿ ಮಾಡಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸದಾನಂದ ಗೌಡರ ಆಪ್ತ ತಮ್ಮೇಗೌಡ ಎಂ. ಎಂಬುವವರು ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌, ಉತ್ತರ ವಿಭಾಗದ ಡಿಸಿಪಿ ಮತ್ತು ಆರ್‌.ಟಿ. ನಗರ ಉಪ ವಿಭಾಗದ ಎಸಿಪಿಗೆ ದೂರು ಸಲ್ಲಿಸಿದ್ದಾರೆ. ‘ರಾಜಕೀಯ ದುರುದ್ದೇಶದಿಂದ ಸಂಸದ ಡಿ.ವಿ. ಸದಾನಂದ ಗೌಡರನ್ನು ಹೋಲುವಂತೆ ನಕಲಿ ವಿಡಿಯೊ ಸೃಷ್ಟಿಸಿ ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಗಿದೆ. ಸಂಸದರ ವ್ಯಕ್ತಿತ್ವಕ್ಕೆ ಕಳಂಕ ತರುವ ಉದ್ದೇಶದಿಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಅವರನ್ನು ಪತ್ತೆಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ದೂರಿನ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸದಾನಂದ ಗೌಡ, ‘ನನ್ನ ರಾಜಕೀಯ ಏಳಿಗೆಯನ್ನು ಸಹಿಸದ ವಿರೋಧಿಗಳು ನನ್ನನ್ನು ಹೋಲುವ ರೀತಿಯಲ್ಲಿ ಕೀಳು ಅಭಿರುಚಿಯ ನಕಲಿ ವಿಡಿಯೊ ಸೃಷ್ಟಿಸಿ ಹರಿಯಬಿಟ್ಟಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೊ ಹರಿದಾಡುತ್ತಿರುವುದರಿಂದ ನನಗೆ ನೋವಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಸಂಬಂಧಿಸಿದ ಅಧಿಕಾರಿಗಳು, ಆರೋಪಿಗಳನ್ನು ತಕ್ಷಣವೇ ಬಂಧಿಸಿ, ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!