ಪರ್ಕಳ: ರಾ.ಹೆದ್ದಾರಿ ದುರಾವಸ್ಥೆಗೆ ಶಾಸಕರೇ ನೇರ ಹೊಣೆ- ರಮೇಶ್ ಕಾಂಚನ್
ಉಡುಪಿ ಸೆ.19(ಉಡುಪಿ ಟೈಮ್ಸ್ ವರದಿ): ಪರ್ಕಳ ರಾಷ್ಟ್ರೀಯ ಹೆದ್ದಾರಿ ದುರಾವಸ್ಥೆ ಹಾಗೂ ಭೂ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬವಾಗಿರುವುದನ್ನು ವಿರೋಧಿಸಿ ಇಂದು ಕಾಂಗ್ರೆಸ್ ವತಿಯಿಂದ ಪರ್ಕಳದ ಬಾಬುರಾಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ನಗರ ಸಭೆಯ ವಿಪಕ್ಷ ನಾಯಕ ರಮೇಶ್ ಕಾಂಚನ್, ಪರ್ಕಳದ ಜನರು ಎಲ್ಲಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕೈ ಹಿಡಿದು ಸ್ಪಷ್ಟ ಬಹುಮತ ನೀಡಿದ್ದಾರೆ . ಆದರೆ ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಪರ್ಕಳದ ಜನರು ಎಂದರೆ ತಾತ್ಸರ ವಾಗಿದೆ. ಇನ್ನು ಮುಂದೆ ಪರ್ಕಳದ ವಿಚಾರದಲ್ಲಿ ತಾರತಮ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಇದಕ್ಕಿಂತ ಕಠಿಣವಾದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪರ್ಕಳ ಹೆದ್ದಾರಿ ಹೊಂಡ ಗುಂಡಿಗಳಿಂದ ಕೂಡಿದ್ದು, ಜನ ವಾಹನ ಸವಾರರಿಗೆ ಈ ಮಾರ್ಗವಾಗಿ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಅಲ್ಲದೆ ಜನರಿಗೆ ನಡೆದುಕೊಂಡು ಹೋಗಲು ಕಷ್ಟ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲಾ ಶಾಸಕರು ನೇರ ಹೊಣೆಯಾಗಲಿದ್ದಾರೆ. ಆದ್ದರಿಂದ ತಕ್ಷಣ ಈ ಬಗ್ಗೆ ಗಮನ ಹರಿಸಿ ಪರ್ಕಳ ಹೆದ್ದಾರಿಯನ್ನು ಕಾಂಕ್ರಿಟ್ ಮಾರ್ಗವಾಗಿ ಬದಲಾವಣೆ ಮಾಡಿ ಜನರು ಸರಾಗವಾಗಿ ಸಂಚರಿಸಲು ಅನುಕೂಲವಾಗುವಂತ ರಸ್ತೆ ನಿರ್ಮಾಣ ಮಾಡಬೇಕು ಎಂದರು.
ಇನ್ನು15 ದಿನಗಳೊಳಗೆ ಈ ಹೆದ್ದಾರಿಯನ್ನು ಪೂರ್ಣ ಗೊಳಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದ ಅವರು, ಜನ ನಿಮ್ಮನ್ನು ನಂಬಿ ನಿಮಗೆ ಅವರ ಜಾಗಗಳನ್ನು ಬಿಟ್ಟು ಕೊಟ್ಟಿದ್ದಾರೆ. ಆದರೆ ನೀವು ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿದ್ದೀರಾ. ಇದು ಹೀಗೆ ಆದರೆ ನಿಮಗೆ ಅಧಿಕಾರ ನೀಡಿದ ಜನವೇ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುತ್ತಾರೆ. ನೀವು ಜನರ ಪರವಾಗಿ ಕೆಲಸ ಮಾಡಬೇಕೇ ಹೊರತು ಜನರ ವಿರುದ್ಧವಾಗಿ ಅಲ್ಲ. ಜನ ನಾಯಕರು ಪರ್ಕಳದ ಜನರನ್ನು ಎಂದೂ ಕೈ ಬಿಡಬಾರದು ಅಭಿವೃದ್ಧಿ ಕೆಲಸದಲ್ಲಿ ತಾರತಮ್ಯ ಮಾಡಬಾರದು.
ಈಶ್ವರ ನಗರದಿಂದ ಪರ್ಕಳದವರೆಗಿನ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಬಗ್ಗೆಈ ಹಿಂದೆ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ನಮ್ಮ ಬಳಿ ಬೇಕಾದಷ್ಟು ಅನುದಾನವಿದೆ. ನಾವು ಜನರಿಗೆ ಮೋಸ ಮಾಡುವುದಿಲ್ಲ, ಜನರಿಗೆ ಪರಿಹಾರ ನೀಡುತ್ತೇವೆ ಎಂದಿದ್ದೀರ ಈಗ ಯಾಕೆ ಮೌನವಾಗಿ ಸುಮ್ಮನೆ ಕೂತಿದ್ದೀರಾ. ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಬೇಕಾದ ವ್ಯವಸ್ಥೆ ಇರುವಾಗ ಕಾಮಗಾರಿ ಯಾಕೆ ಇನ್ನೂ ಪೂರ್ಣಗೊಂಡಿಲ್ಲ. ಎಲ್ಲಡೆ ಬಿಜೆಪಿ ಸರಕಾರವೇ ಇರುವಾಗ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಇಚ್ಚಾಶಕ್ತಿ ಇಲ್ಲವೇ ಎಂದು ಜನಪ್ರತಿನಿದಿಗಳನ್ನು ಪ್ರಶ್ನಿಸಿದರು. ಭೂ ಸಂತ್ರಸ್ತರಿಗೆ ಹಣ ಶೀಘ್ರ ಬಿಡುಗಡೆ ಮಾಡಬೇಕು, ನೂತನ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಪ್ರತಿಭಟನೆಯಲ್ಲಿ ಸರಕಾರವನ್ನುಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಮೃತ ಶೆಣೈ, ಸುಕೇಶ್ ಕುಂದರ್ ಹೆರ್ಗಾ, ಮೋಹನ್ ದಾಸ್ ನಾಯಕ್ ಪರ್ಕಳ, ಗಣೇಶ್ ರಾಜ್ ಸರಳೇಬೆಟ್ಟು,ಗಣೇಶ್ ನೆರ್ಗಿ, ಸುಧಾಕರ್ ಪೂಜಾರಿ,ಸದಾನಂದ ಪೂಜಾರಿ,ಸತೀಶ್ ಶೆಟ್ಟಿ ಕೆಳ ಪರ್ಕಳ, ಅಶೋಕ ಸಾಲಿಯಾನ್ ಹೆರ್ಗ, ಗಣೇಶ್, ನವೀನ್ ಪೂಜಾರಿ ಶೆಟ್ಟಿಬೆಟ್ಟು, ದಿನೇಶ್ ಪೂಜಾರಿ ಮದಗ, ತುಳಜಾ ಉಪೇಂದ್ರ ನಾಯ್ಕ್ ಹಿರಿಯ ಕಾಂಗ್ರೆಸ್ ನಾಯಕ ಶಂಭು ಶೆಟ್ಟಿ ಮತ್ತು, ಗೋಪಾಲ ಆಚಾರ್ಯ, ದೇವಿ ಪ್ರಸಾದ್ ಆಚಾರ್ಯ, ಆದರ್ಶ ಶೆಟ್ಟಿಗಾರ್ ಕೆಳಪರ್ಕಳ, ಹರೀಶ್ ಪೂಜಾರಿ ಕೆಳ ಪರ್ಕಳ, ಹರೀಶ್ ನಾಯ್ಕ ಮಾಣಿಬೆಟ್ಟು, ನೀರಜ್ ಪಾಟೀಲ್ ಶೆಟ್ಟಿಬೆಟ್ಟು, ವೆಂಕಟೇಶ್ ಶೆಟ್ಟಿಗಾರ್, ಜಯ ಶೆಟ್ಟಿ ಬನ್ನಂಜೆ, ವಾಲ್ಟರ್ ಡಿಸೋಜ ಕೊಳಲಗಿರಿ ಮೊದಲಾದವರು ರಸ್ತೆ ತಡೆ ನಡೆಸಿ, ಬಾಳೆಗಿಡ ನೆಟ್ಟು ಸರಕಾರ ವಿರುದ್ಧ ಘೋಷಣೆ ಕೂಗಿದರು.