ಪೂನಾ ಒಪ್ಪಂದಕ್ಕಾಗಿ ದಲಿತರು ಹೋರಾಡಬೇಕು- ಜಯನ್ ಮಲ್ಪೆ

ಉಡುಪಿ: ಎರಡನೆಯ ದುಂಡು ಮೇಜಿನ ಸಭೆಯಲ್ಲಿ ಅಂಬೇಡ್ಕರರು ಮಂಡಿಸಿದ್ದ ದಲಿತರಿಗೆ ಪ್ರತ್ಯೇಕ ಚುನಾವಣಾ ಪ್ರಾತಿನಿಧ್ಯತೆ ನೀಡಬೇಕೆಂಬ ಬೇಡಿಕೆಯನ್ನು ಮತ್ತೊಮ್ಮೆ ದಲಿತರು ದೇಶಾದ್ಯಾಂತ ಹೋರಾಟ ಮಾಡಬೇಕೆಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಕರೆನೀಡಿದ್ದಾರೆ.

ಅವರು ಕುಂದಾಪುರದ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ ಸ್ವಾಭಿಮಾನ ಸಮಾವೇಶ ಮತ್ತು ನೂತನ ಕಂದಾವರ ಗ್ರಾಮ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ದಲಿತರ ಮೇಲೆ ದೌರ್ಜನ್ಯ ನಡೆಸುವವರ ಕೈಯಲ್ಲಿ ರಾಜಕೀಯ ಅಧಿಕಾರ ಇರುವುದರಿಂದ ಇದನ್ನು ಕೊನೆಗಾನಿಸಲು ಅವರ ಕೈಯಲ್ಲಿರುವ ರಾಜಕೀಯ ಅಧಿಕಾರವನ್ನು ದಲಿತರು ಪಡೆಯಬೇಕಾಗಿದೆ ಇದಕ್ಕಾಗಿ ದಲಿತರು ಅಂಬೇಡ್ಕರರ ಪೂನಾ ಒಪ್ಪಂದವನ್ನು ಮರು ಜಾರಿಗೆ ಆಗ್ರಹಿಸಿ ದೇಶವ್ಯಾಪ್ತಿ ಆಂದೊಳನ ನಡೆಸಬೇಕು ಎಂದರು.

ದಸಂಸ ಪ್ರಧಾನ ಸಂ.ಸಂಚಾಲಕ ಮಂಜುನಾಥ ಗಿಳಿಯಾರು ಮಾತನಾಡಿ ಇಂಡಿಯಾ ದೇಶದ ಅಧೋಗತಿಗೆ ಪುರೋಹಿತಶಾಹಿ ಬ್ರಾಹ್ಮಣರೇ ಕಾರಣ, ವಿದ್ಯೆಯನ್ನು ಪಡೆಯಲು ಹೋಗಿ ಬ್ರಾಹ್ಮಣ್ಯದ ವಿರುದ್ಧ ಹೋರಾಟ ಮಾಡಿದ ರಾಮಾಯಣದ ಶಂಭೂಕನು ಇಡೀ ಶೂದ್ರ ಜನಾಂಗಕ್ಕೆ ಸ್ವಾಭಿಮಾನದ ಅಭಿವ್ಯಕಿ ಎಂದರು. ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಬಾಬಿ ಸಮಾವೇಶವನ್ನು ಉದ್ಘಾಟಿಸಿದರು. ದಸಂಸ ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು, ಹಿರಿಯ ಹೋರಾಟಗಾರ ಸುರೇಶ್ ಬಾರ್ಕೂರು, ಪ್ರಭಾಕರ್ ವಿ,ಸಂಜೀವ ತೆಕ್ಕಟ್ಟೆ,ಮಹಿಳಾ ಸಂಚಾಲಕಿ ಗೀತಾ ಸುರೇಶ್, ನಯನ, ಜ್ಯೋತಿ,ಮಂಜುನಾಥ ಬೈಂದೂರು ಮುಂತಾದವರು ಉಪಸ್ಥಿತಿಯಿದ್ದರು. ನಾಗರಾಜ್ ಎಸ್.ವಿ ಸ್ವಾಗತಿಸಿ, ಗಣೇಶ್ ಸಟ್ವಾಡಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!