ಉಡುಪಿ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರ ನೇಮಕ: ಭಿನ್ನಮತ ಸ್ಫೋಟ ?
ಉಡುಪಿ(ಉಡುಪಿ ಟೈಮ್ಸ್ ವರದಿ): ಕಳೆದ ಹಲವು ಸಮಯಗಳಿಂದ ನೂತನ ಅಧ್ಯಕ್ಷರ ಆಯ್ಕೆ ನೆನೆಗುದಿಗೆ ಬಿದ್ದಿದ್ದು, ಇಂದು ಕೊನೆಗೂ ನೂತನ ಅಧ್ಯಕ್ಷರ ನೇಮಕವಾಗಿದೆ. ಇತ್ತ ಉಡುಪಿ ಬ್ಲಾಕ್ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಹೆಸರು ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಕಳೆದ ಹಲವು ಸಮಯಗಳಿಂದ ಬ್ಲಾಕ್ ಬ್ಲಾಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಸತೀಶ್ ಅಮೀನ್ ಪಡುಕೆರೆ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಉಡುಪಿ ನಗರಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಆಯ್ಕೆ ಘೋಷಣೆಯಾಗುತ್ತಿದ್ದಂತೆ, ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಸಮಾಜಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ಬೆಂಬಲಿಗರ ಆಕ್ರೋಶ ಹೊರಬಿದ್ದಿದೆ.
ಕನ್ನರ್ಪಾಡಿಯ ಇತಿಹಾಸ ಪ್ರಸಿದ್ಧ ದೇವಸ್ಥಾನದ ವ್ಯವಸ್ಥಾಪನಾ ಅಧ್ಯಕ್ಷರಾಗಿರುವ ಕೃಷ್ಣಮೂರ್ತಿ ಆಚಾರ್ಯ ಹಲವು ಸಂಘ ಸಂಸ್ಥೆಗಳಲ್ಲಿ ನಾಯಕತ್ವ ವಹಿಸಿದ್ದ ಇವರು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಕಳೆದ ಚುನಾವಣೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಕೃಷ್ಣಮೂರ್ತಿ ಆಚಾರ್ಯ ಯುವಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಕೋವಿಡ್ ಸಂದರ್ಭದಲ್ಲಿ ಉಡುಪಿ, ಕಾಪು ಕ್ಷೇತ್ರದಲ್ಲಿ ತಮ್ಮದೆ ತಂಡ ರಚಿಸಿ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿ ಕೊಂಡ ಕೃಷ್ಣಮೂರ್ತಿ ಆಚಾರ್ಯ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಈ ನಿರ್ಧಾರದಿಂದ ಬೇಸತ್ತು ರಾಜಿನಾಮೆ ಸಲ್ಲಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ನ ಎನ್ಎಸ್ಐಯು, ಡಿಕೆಶಿ ಅಭಿಮಾನಿ ಬಳಗ, ರಾಹುಲ್ ಬ್ರಿಗೇಡ್, ಗ್ರಾಮ ಪಂಚಾಯತ್ ಸದಸ್ಯರು ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷ ಬೆಳೆಸಬೇಕಾದ ಹಿರಿಯ ನಾಯಕನಲ್ಲಿ ಕೇವಲ ಜಾತಿ ಪ್ರೇಮವೇ ಹೆಚ್ಚಾಯಿತೇ? ಈಗಾಲೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಈ ಹಿಂದಿನ ಬ್ಲಾಕ್ ಅಧ್ಯಕ್ಷ ಹುದ್ದೆ ಕೂಡ ಮೋಗವೀರ ಸಮುದಾಯಕ್ಕೆ ನೀಡಲಾಗಿದ್ದು. ಮತ್ತೇ ಅದೇ ಸಮುದಾಯಕ್ಕೆ ನೀಡಿದ್ದು ಕೃಷ್ಣಮೂರ್ತಿ ಆರ್ಚಾಯ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.ಪಕ್ಷ ಎಂದಾಕ್ಷಣ ಎಲ್ಲಾ ಸಮುದಾಯದವರನ್ನು ಒಟ್ಟಿಗೆ ಕೊಂಡೊಯ್ಯುವ ಮನಸ್ಥಿತಿ ಹಿರಿಯ ನಾಯಕರಲ್ಲಿ ಇರಬೇಕು. ಅದು ಬಿಟ್ಟು ಕೇವಲ ತನ್ನ ಸಮುದಾಯದವರೇ ಎಲ್ಲಾ ಹುದ್ದೆ ಅನುಭವಿಸಲಿ ಎಂಬ ಮನೋಭಾವ ಹೊಂದಿದ ಹಿರಿಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತವಾಗತೊಡಗಿದೆ.