ಪರ್ಕಳ ರಾ.ಹೆ ಕಾಮಗಾರಿ ಅಪೂರ್ಣ: ಸೆ.19 ರಂದು ಪ್ರತಿಭಟನೆ

ಉಡುಪಿ ಸೆ.17(ಉಡುಪಿ ಟೈಮ್ಸ್ ವರದಿ): ಪರ್ಕಳದ ರಾ.ಹೆ ಕಾಮಗಾರಿ ಪೂರ್ಣಗೊಳಿಸದೇ ಇರುವುದನ್ನು ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಸೆ.19 ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ರಾಜ್ ಸರಳೆ ಬೆಟ್ಟು, ಸುಕೇಶ್ ಕುಂದರ್, ಮೋಹನ್ ದಾಸ್ ನಾಯಕ್ ಅವರು ಮಾಹಿತಿ ನೀಡಿ, ರಸ್ತೆ ಕಾಮಗಾರಿ‌ ಆರಂಭಗೊಳ್ಳದೇ ಹೊಂಡ ಗುಂಡಿಗಳಿಂದ ಕೂಡಿದ ಕೆಸರುಮಯ ರಸ್ತೆಯಾಗಿ ಪರಿವರ್ತನೆಯಾದ ರಸ್ತೆ ಕಾಣಸಿಗುತ್ತದೆ, ಆದುದರಿಂದ ಸಂತ್ರಸ್ತರಿಗೆ ಶೀಘ್ರ ಪರಿಹಾರ ಹಣ ಬಿಡುಗಡೆ ಮಾಡಬೇಕು ಹಾಗೂ ರಸ್ತೆ ಕಾಮಗಾರಿ ಪೂರ್ಣಗೊಳಿಸ ಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ. 

ಈ ಪ್ರತಿಭಟನೆಯು ಸೆ.19 ರಂದು ಬೆಳಿಗ್ಗೆ 9.30 ರ ವೇಳೆಗೆ ಪರ್ಕಳದ ಬಾಬುರಾಯ ಸರ್ಕಲ್ ಬಳಿ ನಡೆಯಲಿದೆ.ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಾರ್ವಜನಿಕರು, ವಾಹನ ಚಾಲಕರು, ಮತ್ತು ಈ ರಸ್ತೆಯ ಅಗಲೀಕರಣಕ್ಕೆ ಭೂಮಿ ನೀಡಿ ಪರಿಹಾರ ಸಿಗದೇ ಇರುವ ಭೂ ಸಂತ್ರಸ್ತರು ಭಾಗವಹಿಸುವುದಾಗಿ ತಿಳಿಸಿದ್ದಾರೆ.

ಇನ್ನು ರಸ್ತೆ ಅಗಲೀಕರಣದ ನೆಪವೊಡ್ಡಿ ತರಾತುರಿಯಲ್ಲಿ ರಸ್ತೆ ಅಗಲೀಕರಣ ಮಾಡಲಾಗಿದೆ ಆದರೆ ರಾ. ಹೆದ್ದಾರಿಯ ಕಾಮಗಾರಿ ಪೂರ್ಣಗೊಳಿಸಿಲ್ಲ. ಇದರಿಂದ ಈ ಮಾರ್ಗದಲ್ಲಿ ಸಾರ್ವಜನಿಕರಿಗೆ ವಾಹನ ಚಲಾಯಿಸಲು ತೊಂದರೆ ಉಂಟಾಗಿದೆ. ಅನೇಕರು ನೂತನ ರಾಷ್ಟ್ರೀಯ ಹೆದ್ದಾರಿಗೆ ತಮ್ಮ ಸ್ವಂತ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ ಅವರಿಗೆ ಪರಿಹಾರ ನೀಡದೆ 3 ತಿಂಗಳು ಕಳೆದಿವೆ. ಈಗ ಪರ್ಕಳ ಸ್ಟೇಟ್ ಬ್ಯಾಂಕ್ ನಿಂದ ಕೆಳಪರ್ಕಳದ ಕೆನರಾ ಬ್ಯಾಂಕ್ ವರೆಗಿನ ರಸ್ತೆಯನ್ನು ಅಗಲೀಕರಣ ಕಾಮಗಾರಿ ನಡೆಸಲು ಯಾವುದೇ ಇರುವುದಿಲ್ಲ. ಆದರೂ ಕಾಮಗಾರಿ ಆರಂಭವಾಗಿಲ್ಲ. ಈಗಾಗಲೇ ರಾ. ಹೆದ್ದಾರಿ ಕಾಮಗಾರಿಗೆ 98 ಕೋಟಿ ರೂ ಹಣ ಬಿಡುಗಡೆಯಾಗಿರವುದಾಗಿ‌ ಈ ಹಿಂದಿನ ಸಭೆಯಲ್ಲಿ ತಿಳಿಸಿದ್ದರೂ  ಪರಿಹಾರ ನೀಡಲು ವಿಳಂಬ ಯಾಕೆ? ಈಗ ಅಗಲೀಕರಣ ಮಾಡಿದ ರಸ್ತೆಯನ್ನು ಕಳೆದ ಮೇ ತಿಂಗಳ ಒಳಗೆ ಪೂರ್ಣಗೊಳಿಸುತ್ತೇನೆ ಎಂದು ಆಡಳಿತಾತ್ಮಕ ಸರಕಾರದ ಜನ ನಾಯಕರು ನೀಡಿದ ಆಶ್ವಾಸನೆ ಸುಳ್ಳಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Leave a Reply

Your email address will not be published. Required fields are marked *

error: Content is protected !!