ಹಿಂದೂ ದೇವಾಲಯಗಳ ಧ್ವಂಸ: ಧರ್ಮ ರಕ್ಷಕರು ಈಗೆಲ್ಲಿ?- ಮಹಿಳಾ ಕಾಂಗ್ರೆಸ್ ಪ್ರಶ್ನೆ

ಹಿಂದೂ ಧರ್ಮದ, ಹಿಂದೂ ದೇವಾಲಯಗಳ ಕುರಿತು ಭಾವನಾತ್ಮಕವಾಗಿ ಮಾತನಾಡಿ ಜನರನ್ನು ಮರುಳು ಮಾಡುವ ಧರ್ಮ ರಕ್ಷಣೆಯ ಹೆಸರಿನಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸುವ ಧರ್ಮರಕ್ಷಕರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸರ್ಕಾರವುಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸುತ್ತಿರುವುದನ್ನು ಯಾಕೆ ಪ್ರಶ್ನಿಸುತ್ತಿಲ್ಲ? ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಶ್ನಿಸಿದೆ.

ಹಿಂದೂ ಧರ್ಮ,ಹಿಂದೂ ದೇವಾಲಯಗಳು ಹಾಗೂ ಹಿಂದೂಗಳನ್ನು ಗುತ್ತಿಗೆಗೆ ಪಡೆದುಕೊಂಡವರಂತೆ ಮಾತನಾಡುವ ಪತ್ರಿಕೆಗಳ ಮೂಲಕ ಹೇಳಿಕೆಗಳನ್ನು ಕೊಡುವ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ಇಂದು ಮೌನವಾಗಿರುವುದೇಕೆ ಅವರಲ್ಲಿನ ಹಿಂದೂ ಪ್ರೇಮ ಇಂದು ಈ ಘಟನೆ ನಡೆಯುತ್ತಿರುವಾಗ ಎಲ್ಲಿ ಅಡಗಿ ಹೋಗಿದೆ? ಎಂದು ಪ್ರಶ್ನಿಸಿರುವ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಸರ್ಕಾರವು ಈ ಸಮಸ್ಯೆಯನ್ನು ಸೌಹಾರ್ದತೆಯಿಂದ ಪರಿಹರಿಸುವತ್ತ ಗಮನಕೊಡ ಬೇಕಿತ್ತು. ಅದು ಬಿಟ್ಟು ಏಕಾಏಕಿಯಾಗಿ ದೇವಾಲಯಗಳನ್ನು ಧ್ವಂಸ ಗೊಳಿಸುವ ಮೂಲಕ ಜನರಿಗೆ ನೋವು ನೀಡುವಂತಹ ಹೀನ ಕೆಲಸಕ್ಕೆ ಬಿಜೆಪಿ ಸರ್ಕಾರವು ಇಳಿದಿರುವುದು ದುರಾದೃಷ್ಟಕರ.

ಬೇಲಿಯೇ ಎದ್ದು ಹೊಲ ಮೇಯುವಂತೆ ಹಿಂದುತ್ವದ ಬಗ್ಗೆ ಮಾತನಾಡುವವರೇ ಹಿಂದುತ್ವದ ಅಳಿವಿಗೆ ಕೈಹಾಕಿದ್ದಾರೆ. ಮತಾಂತರ ಮತ್ತು ಗೋ ಅಕ್ರಮವನ್ನು ಹಿಂದೂ ಸಮಾಜ ಸಹಿಸದು ಎಂದು ಗುಡುಗುವ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಅವರೇ, ಇದೀಗ ಹಿಂದೂ ಧರ್ಮದ ಬುಡಕ್ಕೇ ಕೊಡಲಿ ಬಿದ್ದಿದೆ. ಇದನ್ನು ತಾವು ಸಹಿಸುವಿರೇ? ನಿಜವಾಗಿಯೂ ತಾವೊಬ್ಬ ಹಿಂದೂ ಪ್ರೇಮಿಯಾಗಿದ್ದರೇ ಸರ್ಕಾರದ ಈ ಕ್ರಮದ ವಿರುದ್ಧ ಧ್ವನಿ ಎತ್ತಿ, ದೇವಾಲಯಗಳನ್ನು ಉಳಿಸಿಕೊಳ್ಳಲು ಹೋರಾಡಿ ಎಂದು ಗೀತಾ ವಾಗ್ಳೆ ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!