ಉಳ್ಳಾಲ: ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ- 33 ಸಾವಿರ ವೋಲ್ಟ್ ವಿದ್ಯುತ್ ಹರಿದು ಗುತ್ತಿಗೆ ಕಾರ್ಮಿಕ ಗಂಭೀರ
ಉಳ್ಳಾಲ, ಸೆ.15: ತೊಕ್ಕೊಟ್ಟಿನ ಚೆಂಬುಗುಡ್ಡೆ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 33 ಸಾವಿರ ವೋಲ್ಟ್ ವಿದ್ಯುತ್ ಹರಿಯುವ ಕಂಬಕ್ಕೇರಿದ ಗುತ್ತಿಗೆ ಕಾರ್ಮಿಕನೊಬ್ಬ ಭಾಗಶಃ ಸುಟ್ಟು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಹಾವೇರಿ ಜಿಲ್ಲೆ, ಶಿಗ್ಗಾಂವಿ ತಾಲೂಕಿನ ಮಣಿಕಟ್ಟೆ ನಿವಾಸಿ ಬೊಮ್ಮಪ್ಪ(26) ಗಂಭೀರ ಗಾಯಗೊಂಡ ಕಾರ್ಮಿಕ. ಬೊಮ್ಮಪ್ಪ ಅವರು ಪ್ರವೀಣ್ ಸುವರ್ಣ ಎಂಬ ಮೆಸ್ಕಾಂ ಗುತ್ತಿಗೆದಾರರ ಜೊತೆ ಕಳೆದ ಐದು ತಿಂಗಳುಗಳಿಂದ ಚೆಂಬುಗುಡ್ಡೆ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಇಂದು ಸಂಜೆ ಇತರ ಕಾರ್ಮಿಕರ ಜೊತೆ ಬೊಮ್ಮಪ್ಪ ಮೆಸ್ಕಾಂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಚೇರಿಯ ಅಂಗಣದಲ್ಲಿರುವ 33,000 ವೋಲ್ಟ್ ಯಾರ್ಡ್ ನಲ್ಲಿರುವ ಕಂಬಕ್ಕೆ ಏರಿ ಜಂಪರ್ ಟೈಟ್ ಮಾಡುವಂತೆ ಮೆಸ್ಕಾಂ ನ ಎಡಬ್ಲ್ಯೂಬಿ ದಯಾನಂದ್ ಎಂಬವರು ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ಹೈ ವೋಲ್ಟ್ ವಿದ್ಯುತ್ ಹರಿಯುತ್ತಿದ್ದರೂ ಲೈನ್ ಆಫ್ ಆಗಿದೆ ಎಂದು ಹೇಳಿ ಕಂಬಕ್ಕೇರಿದ್ದು ಕೆಲವೇ ಕ್ಷಣಗಳಲ್ಲಿ ಇತರ ಕಾರ್ಮಿಕರ ಎದುರೇ ಬೊಮ್ಮಪ್ಪ ಭಾಗಶಃ ಸುಟ್ಟು ಹೋಗಿದ್ದರು.
ಕೂಡಲೇ ಮೆಸ್ಕಾಂ ಸಿಬ್ಬಂದಿ ಬೊಮ್ಮಪ್ಪ ಅವರನ್ನ ಕೆಳಗಿಳಿಸಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿದ್ಯುತ್ ಆಘಾತಕ್ಕೆ ಬೊಮ್ಮಪ್ಪ ಅವರ ಸೊಂಟಕ್ಕಿಂತ ಕೆಳಗಿನ ಭಾಗ ಸಂಪೂರ್ಣ ಸುಟ್ಟು ಹೋಗಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ದಿ ಮೈಸೂರ್ ಇಲೆಕ್ಟ್ರಿಕಲ್ಸ್ ಲಿ. ನ ಅಧ್ಯಕ್ಷರಾದ ಸಂತೋಷ್ ಬೋಳಿಯಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಸ್ಥಳೀಯ ಕೌನ್ಸಿಲರ್ ರಾಜೇಶ್ ಯು.ಬಿ ಅವರು ಮೆಸ್ಕಾಂ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.