| ಮಂಗಳೂರು, ಸೆ.15: ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಸತ್ರ ಮತ್ತು ತ್ವರಿತಗತಿ ನ್ಯಾಯಾಲಯವು (ಪೊಕ್ಸೋ) 10 ವರ್ಷ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ನವೀನ್ (27) ಶಿಕ್ಷೆಗೊಳಗಾದ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಾವಿತ್ರಿ ವಿ.ಭಟ್ ಅವರು ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿ ಅತ್ಯಾಚಾರ ಅಪರಾಧಕ್ಕೆ 7 ವರ್ಷ ಕಠಿಣ ಸಜೆ ಮತ್ತು 5,000 ರೂ. ದಂಡ ಹಾಗೂ ಪೊಕ್ಸೋ ಕಾಯಿದೆಯ ಕಲಂನಡಿ 10 ವರ್ಷ ಕಠಿಣ ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ (ಪೊಕ್ಸೋ) ಸಿ.ವೆಂಕಟರಮಣ ಸ್ವಾಮಿ ವಾದಿಸಿದ್ದರು.
ಈತ ತನ್ನದೇ ಪತ್ನಿಯ ಅಪ್ರಾಪ್ತ ತಂಗಿಯನ್ನು ಅತ್ಯಾಚಾರ ಎಸಗಿದ್ದು ಆತನ ವಿರುದ್ಧದ 2 ನೇ ಅತ್ಯಾಚಾರ ಪ್ರಕರಣ ಇದಾಗಿದೆ. ಈ ಬಗ್ಗೆ 2019ರ ಜೂ.27 ರಂದು ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿಯ ಅಂದಿನ ಪೆÇ್ರಬೆಷನರಿ ಡಿವೈಎಸ್‍ಪಿ, ಪ್ರಭಾರ ವೃತ್ತನಿರೀಕ್ಷಕ ಗೋವಿಂದ ರಾಜು ಬಿ. ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಇನ್ನು ಅಪರಾಧಿ ನವೀನ್ 2017ರಲ್ಲಿ ಈ ಪ್ರಕರಣದ ಸಂತ್ರಸ್ತೆಯ ಅಕ್ಕನ ಮೇಲೆಯೂ ಅತ್ಯಾಚಾರ ಎಸಗಿದ್ದ. ಪರಿಣಾಮ ಈಕೆ ಗರ್ಭವತಿಯಾಗಿದ್ದಳು. ಈ ಬಗ್ಗೆ ಪ್ರಕರಣ ದಾಖಲಾಗಿ ಬಂಧಿಸಲ್ಪಟ್ಟಿದ್ದ ಆರೋಪಿ ಜಾಮೀನಿನ ಮೇಲೆ ಬಿಡುಗಡೆ ಗೊಂಡಿದ್ದ. ಬಳಿಕ ಯುವತಿ ವಯಸ್ಕಳಾದಾಗ ಆಕೆಯನ್ನು ವಿವಾಹವಾಗಿದ್ದ. ಈ ನಡುವೆ ವಿವಾಹದ ಬಳಿಕ ಅತ್ತೆ ಮನೆಯಲ್ಲಿಯೇ ವಾಸವಾಗಿದ್ದ ಆತ ಮತ್ತೆ ತನ್ನ ಹಳೆ ಚಾಳಿ ಮುಂದುವರಿಸಿ ಪತ್ನಿಯ ಅಪ್ರಾಪ್ತ ವಯಸ್ಸಿನ ತಂಗಿ ಮೇಲೆ ಅತ್ಯಾಚಾರ ಎಸಗಿದ್ದು, ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಮಂಗಳೂರು ನ್ಯಾಯಾಲಯ ಶಿಕ್ಷೆ ವಿಧಿಸಿದೆ.
| |