| ಉಡುಪಿ ಸೆ.14 (ಉಡುಪಿ ಟೈಮ್ಸ್ ವರದಿ): ಅಗಲಿದ ಕಾಂಗ್ರೆಸ್ ನ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಇಂದು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಶಾಸಕ ಕೆ. ರಘುಪತಿ ಭಟ್ ರವರು ಭಾಗವಹಿಸಿ ಆಸ್ಕರ್ ಫೆರ್ನಾಂಡಿಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಉಡುಪಿ ನಗರ ಸಭೆಗೂ ಆಸ್ಕರ್ ಫರ್ನಾಂಡಿಸ್ ಅವರಿಗೂ ನಿಕಟವಾದ ಸಂಬಂಧವಿದೆ. ಉಡುಪಿಯಲ್ಲಿ ನಗರಸಭಾ ಸದಸ್ಯರಾಗಿ ಜನಪ್ರತಿನಿಧಿಗಳಾಗಿದ್ದವರಲ್ಲಿ ಆಸ್ಕರ್ ಫರ್ನಾಂಡಿಸ್ ಅವರು ಕೂಡಾ ಒಬ್ಬರು. ಉಡುಪಿ ಯ ಬೋರ್ಡ್ ಹೈಸ್ಕೂಲ್ ನ ಅಮೃತ ಮಹೋತ್ಸವದ ಸಂದರ್ಭದಲ್ಲಿ ಶಾಲೆಗೆ ಒಂದು ಕೋಟಿ ರೂ. ಕೊಟ್ಟು ಶಾಲೆಯ ಅಭಿವೃದ್ಧಿಗೆ ನೆರವಾಗಿದ್ದರು.
ಕೃಷಿಯಿಂದ ಹಿಡಿದು ವ್ಯವಹಾರದವರೆಗೆ ಹಾಗೂ ಕಾರ್ಮಿಕರ ಜೊತೆಗೆ ನಿರಂತರ ಇದ್ದವರು. ಟೆಂಪೋ ಚಾಲಕ ಮಾಲಕರ ಸಂಘದ ಅಧ್ಯಕ್ಷರಾಗಿ ಕಾರ್ಮಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡವರು. ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ ಸಂದರ್ಭದಲ್ಲಿ ಚುನಾವಣೆಯ ಖರ್ಚಿಗೆ ರಿಕ್ಷಾ ಚಾಲಕರು ಚಂದಾ ವಸೂಲಿಮಾಡಿ ಸಹಕಾರ ನೀಡಿದ್ದರು ಎನ್ನುವುದನ್ನು ಕೇಳಿ ತಿಳಿದುಕೊಂಡಿದ್ದೇವೆ ಎಂದರು.
ಇದೇ ವೇಳೆ ವಿರೋಧ ಪಕ್ಷದ ನಾಯಕರು ನಿಧನರಾದಾಗ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಸುವಂತಹ ಸಂಸ್ಕ್ರತಿ ಬೇರೆ ಜಿಲ್ಲೆಯಲ್ಲಿ ಕಾಣಸಿಗಲಿಕ್ಕಿಲ್ಲ ಎಂಬ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರ ಮಾತನ್ನು ಶಾಸಕರು ಪುನರುಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರವಿ ಅಮೀನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರ ಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ರಾಜ್ಯ ಕಾರ್ಯಕಾರಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು ಹಾಗೂ ಪಕ್ಷದ ಹಿರಿಯರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. | |