ಉದ್ಯಾವರ: ಜಮಾಬಂದಿಗೆ ಮಾಹಿತಿ ನೀಡದ ಪಂಚಾಯತ್- ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು
ಉದ್ಯಾವರ ಸೆ.14(ಉಡುಪಿ ಟೈಮ್ಸ್ ವರದಿ): ಉದ್ಯಾವರ ಗ್ರಾಮ ಪಂಚಾಯತ್ ತರಾತುರಿಯಲ್ಲಿ ಜಮಾ ಬಂದಿ ನಡೆಸಲು ಉದ್ದೇಶಿಸಿರುವುದನ್ನು ಖಂಡಿಸಿ ಇಂದು ಗ್ರಾಮಸ್ಥರು ಪಂಚಾಯತ್ ಕಚೇರಿಗೆ ತೆರಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಬಳಿಕ ಇಂದು ಉದ್ಯಾವರ ಪಂಚಾಯತ್ ನಲ್ಲಿ ನಡೆಯಬೇಕಿದ್ದ ಜಮಾಬಂದಿಯನ್ನು ರದ್ದುಗೊಳಿಸಲಾಯಿತು. ಹಾಗೂ ಜಮಾಬಂದಿಯನ್ನು ಗ್ರಾಮಸಭೆಯ ನಂತರ ನಡೆಸಲು ತಿರ್ಮಾನ ಕೈಗೊಳ್ಳಲಾಯಿತು. ಉದ್ಯಾವರ ಪಂಚಾಯತ್ ಲೆಕ್ಕಿಗರನ್ನು ಬೇರೆ ಪಂಚಾಯತ್ ಜಮಾಬಂಧಿಗೆ ನಿಯೋಜಿಸಿದ್ದರಿಂದ ಸಿಟ್ಟುಗೊಂಡ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು.
ಈ ವೇಳೆ, ಆಡಳಿತ ಅಧಿಕಾರಿಗಳು ಕಾರ್ಯನಿರ್ವಹಿಸುವ ಸಮಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಗುಮಾನಿ ಇದ್ದು, ಸಾರ್ವಜನಿಕರಿಗೆ ನಮ್ಮ ಪಂಚಾಯತ್ ನ ಲೆಕ್ಕಿಗನು ಜಮಾಬಂದಿಗೆ ಹಾಜರಿರಬೇಕೆಂದು ಒತ್ತಾಯ ಮಾಡಿದರು. ಕಾಮಗಾರಿಗಳ ಪಟ್ಟಿಯನ್ನು ಫ್ಲೆಕ್ಸ್ ಮೂಲಕ ಸಾರ್ವಜನಿಕರಿಗೆ ನೋಡುವ ಹಾಗೆ ಜಮಾಬಂಧಿಯ ಮೊದಲು ಪಂಚಾಯತ್ ಮುಂಭಾಗದಲ್ಲಿ ಹಾಕಬೇಕು ಹಾಗೂ ಜಮಾಬಂದಿಯ ಬಗ್ಗೆ ಸಾರ್ವಜನಿಕರಿಗೆ 1 ವಾರ ಮೊದಲು ಮಾಹಿತಿ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ಕೊನೆಗೆ ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಜಮಾಬಂದಿ ಅಧಿಕಾರಿ ರಮೇಶ್ ರವರು ಉದ್ಯಾವರ ಪಂಚಾಯತ್ ಜಮಾಬಂದಿಯನ್ನು ರದ್ದುಪಡಿಸಿದರು.