ಸೆ.15 ರಂದು ಶಿಕ್ಷಕಿ ಚೇರ್ಕಾಡಿ ದೊಡ್ಡಮನೆ ಸುಲೋಚನಾ ಶೆಟ್ಟಿ ಕೊಡವೂರು 75ರ ಸಂಭ್ರಮ 

ಉಡುಪಿ, ಸೆ.14: ಶಿಕ್ಷಕಿಯಾಗಿ ಎಲ್ಲರ ಮೆಚ್ಚುಗೆ ಪಡೆದು ಉತ್ತಮ ಶಿಕ್ಷಕಿಯಾಗಿ ಗುರುತಿಸಿಕೊಂಡ ಚೇರ್ಕಾಡಿ ದೊಡ್ಡಮನೆ ಸುಲೋಚನಾ ಶೆಟ್ಟಿ ಕೊಡವೂರು ಅವರಿಗೆ 75ರ ಸಂಭ್ರಮ. 

ಈ ಹಿನ್ನೆಲೆಯಲ್ಲಿ ಅವರ 75 ರ ಸಂಭ್ರಮ ಮತ್ತು ಅಭಿನಂದನಾ ಕಾರ್ಯಕ್ರಮ ನಾಳೆ (ಸೆ.15) ಬೆಳಗ್ಗೆ 10.30ರಿಂದ ಮಧ್ಯಾಹ್ನ 2.30ರ ವರೆಗೆ ಕೊಡವೂರಿನ ಶ್ರೀ ಶಂಕರನಾರಾಯಣ ದೇಗುಲದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 10.30ರಿಂದ ಸತ್ಯನಾರಾಯಣ ಪೂಜೆ, 11.30ರಿಂದ ಸಭೆ ನಡೆಯಲಿದ್ದು ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿದೆ.

1947ರ ಸೆ.15ರಂದು ಕೊಡವೂರು ಕೃಷಿಕರಾಗಿದ್ದ ಚೇರ್ಕಾಡಿಯ ದೊಡ್ಡಮನೆ ದಿ.ಪದ್ಮಾವತಿ ಶೆಟ್ಟಿ, ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಕೊಡವೂರು ಜನ್ನಿಬೆಟ್ಟು ದಿ.ಗೋಪಾಲ ಶೆಟ್ಟರ ಹಿರಿಯ ಪುತ್ರಿಯಾಗಿ ಜನಿಸಿದರು. ಶಿಕ್ಷಕಿಯಾದ ಬಳಿಕ ವಿದ್ಯಾರ್ಥಿಗಳ ಮನದಲ್ಲಿ ಉತ್ತಮ ಶಿಕ್ಷಕಿಯಾಗಿ ಗುರುತಿಸಿಕೊಂಡ ಇವರು,ಎಸ್‌ವಿಎಸ್ ವಿದ್ಯಾವರ್ಧಕ ಸಂಘ ಕಟಪಾಡಿ ಆಡಳಿತ ಮಂಡಳಿಯ ಪ್ರಾಥಮಿಕ ಶಾಲೆಗಳಲ್ಲಿ 33 ವರ್ಷ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಮಾತ್ರವಲ್ಲದೆ ಈ ಸಂಸ್ಥೆಯಲ್ಲಿ ಎಲ್ಲಾ ತರಗತಿಗಳ ಎಲ್ಲ ಪಾಠಗಳಲ್ಲದೆ, ವಿಶೇಷವಾಗಿ ಕನ್ನಡ, ವಿಜ್ಞಾನ ವಿಷಯಗಳಲ್ಲಿ ವಿದ್ಯಾರ್ಜನೆ ಮಾಡಿ, ಅನಂತರ 27 ವರ್ಷ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿದ್ದಾರೆ. ಇವರು  2004ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಸಂಪನ್ಮೂಲ ವ್ಯಕ್ತಿಯಾಗಿಯೂ ಗುರುತಿಸಿ ಕೊಂಡಿದ್ದಾರೆ. ಅವರ ‘ಅರಿವು’ ಕವನಸಂಕಲನವು ಅಖಿಲಭಾರತ ಸಾಹಿತ್ಯ ಸಮ್ಮೇಳನ ಮೂಡುಬಿದಿರೆಯಲ್ಲಿ ಬಿಡುಗಡೆಯಾಗಿ ಹಲವೆಡೆಗಳಲ್ಲಿ ಬೀದಿ ನಾಟಕದ ಮೂಲಕ ಪ್ರಚಾರಗೊಂಡಿದೆ.

ಪ್ರೊ. ರೋಹಿಡೇಕರ್ ವರದಿಯ ಹೊಸ ಪಠ್ಯ ವಸ್ತು ತಯಾರಿ, ಕನಿಷ್ಠ ಕಲಿಕಾ ಸರಣಿ ನಿರ್ಮಾಣದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಶಿಕ್ಷಕ ಪ್ರತಿನಿಧಿಯಾಗಿದ್ದರು. ಮಂಗಳೂರಿನ ಪಡಿ ವೆಲೋರೆಡ್ ಸಂಸ್ಥೆಯ ಜಿಲ್ಲೆಯ ಪ್ರಥಮ ಅಧ್ಯಕ್ಷೆಯಾಗಿ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿಯಾಗಿ, ತಾಲೂಕು ಕೇಂದ್ರದ ಉಪಾಧ್ಯಕ್ಷೆಯಾಗಿ ಮುಖ್ಯ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮಕ್ಕಳ ಕಲ್ಯಾಣ ಸಮಿತಿ ಸಹಿತ ಹತ್ತಾರು ವಿಷಯಗಳ ಬಗ್ಗೆ ಹೋರಾಟ ನಡೆಸಿದ ಅವರು ಯೋಗ ಶಿಕ್ಷಕಿಯಾಗಿ 5,000ಕ್ಕೂ ಹೆಚ್ಚಿನ ಜನರಿಗೆ ಯೋಗ ತರಬೇತಿ ನೀಡಿದ್ದಾರೆ. ಕೊರಂಗ್ರಪಾಡಿ ದೊಡ್ಡಮನೆ ದಿ. ಜಯರಾಮ ಶೆಟ್ಟರ ಪತ್ನಿಯಾಗಿದ್ದು, ಇವರ ಓರ್ವ ಪುತ್ರ ಓಂಪ್ರಸಾದ್  ಸ್ವೋದ್ಯೋಗಿದ್ದು, ಇನ್ನೋರ್ವ ಪುತ್ರ ಪ್ರೇಮ್‌ ಪ್ರಸಾದ್‌ ನ್ಯಾಯವಾದಿಯಾಗಿದ್ದಾರೆ. 

Leave a Reply

Your email address will not be published. Required fields are marked *

error: Content is protected !!