ಆಸ್ಕರ್ ಅವರ ಸರಳತೆ ಹಾಗೂ ಸೇವೆಯೇ ಜನಮಾನಸದಲ್ಲಿ ಚಿರವಾಗಿ ಉಳಿಯುವಂತೆ ಮಾಡಿದೆ- ರೊನಾಲ್ಡ್ ಕರ್ಕಡ
ಉಡುಪಿ ಸೆ.14(ಉಡುಪಿ ಟೈಮ್ಸ್ ವರದಿ): ಆಸ್ಕರ್ ಫೆರ್ನಾಂಡಿಸ್ ಓರ್ವ ಮಹಾನ್ ನಾಯಕ. ಅವರು ತನಗೆ ಮತ್ತು ತನ್ನ ಕುಟುಂಬಕ್ಕಾಗಿ ಬದುಕದೆ, ಜನರಿಗಾಗಿಯೇ ಬದುಕಿದವರು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಆಪ್ತ ಮತ್ತು ಇಂಡಿಯನ್ ಕ್ರಿಶ್ಚಿಯನ್ ಯೂನಿಯನ್ ಇದರ ಗೌರವಾಧ್ಯಕ್ಷರಾದ ರೊನಾಲ್ಡ್ ಮನೋಹರ್ ಕರ್ಕಡ ಅವರು ಹೇಳಿದ್ದಾರೆ.
ಅಗಲಿದ ಆಪ್ತನನ್ನು ಸ್ಮರಿಸುತ್ತಾ ಅವರ ಸಾಧನೆಗಳ ಬಗ್ಗೆ ಮಾತನಾಡಿದ ಅವರು, ತಳಹದಿಯ ಕಾರ್ಯಕರ್ತನಿಂದ ಹಿಡಿದು ತುತ್ತ ತುದಿಯ ನಾಯಕನವರೆಗೆ ಬೆಳೆಯಲು ಅವರ ಸರಳತೆಯೇ ಕಾರಣ. ಗುಜರಾತಿನಿಂದ ಕಲ್ಕತ್ತವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ನಾಯಕರ ಸಂಪರ್ಕ ಹೊಂದಿರುವ ಏಕೈಕ ನಾಯಕರೆಂದರೆ ಅದು ಆಸ್ಕರ್ ಫೆರ್ನಾಂಡಿಸ್ ಮಾತ್ರ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಎಂಆರ್ಪಿಎಲ್, ಮಲ್ಪೆಯ 3 ಫಿಶಿಂಗ್ ಹಾರ್ಬರ್ ಆರಂಭವಾಗುವಲ್ಲಿ ಇವರ ಪಾತ್ರ ಪ್ರಮುಖವಾದದ್ದು.
ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುತ್ತಿದ್ದ ಅವರು, ಮೀನುಗಾರರ ಸಮಸ್ಯೆಗೆ ತಕ್ಷಣ ಸ್ಪಂದಿಸುತ್ತಿದ್ದರು. ತನ್ನ ಅನುದಾನ ದಿಂದ ನಿರ್ಮಾಣವಾದ ರಸ್ತೆಗಳಿಗೆ ಅವರ ಹೆಸರು ಸೂಚಿಸಿದಾಗಲೂ ಅವರು ಅದನ್ನು ನಿರಾಕರಿಸುತ್ತಿದ್ದರು. ಇವರ ಸರಳತೆಯೇ ಹಾಗೂ ಅವರ ಸೇವೆಯೇ ಅವರು ಜನಮಾನಸದಲ್ಲಿ ಚಿರವಾಗಿ ಉಳಿಯುವಂತೆ ಮಾಡಿದೆ ಎಂದು ರೊನಾಲ್ಡ್ ಕರ್ಕಡ ತಿಳಿಸಿದ್ದಾರೆ.
ಇಂಡಿಯನ್ ಕ್ರಿಶ್ಚಿಯನ್ ಯೂನಿಯನ್ ವತಿಯಿಂದ ತೀವ್ರ ಸಂತಾಪ ಸೂಚಿಸಿದ ಸೂಚಿಸಿದ ಅವರು, ಆಸ್ಕರ್ ರನ್ನು ಕಳೆದು ಕೊಂಡದ್ದು ಉಡುಪಿಗೆ ಮಾತ್ರವಲ್ಲದೆ ದೇಶಕ್ಕೆ ಅತಿ ದೊಡ್ಡ ನಷ್ಟ ಎಂದು ಹೇಳಿದ್ದಾರೆ. ಕ್ರಿಶ್ಚಿಯನ್ ಯೂನಿಯನ್ ಪ್ರಮುಖರಾದ ಮೆಲ್ವಿನ್ ಡಿಸೋಜಾ, ಚಾರ್ಲ್ಸ್ ಅಂಬ್ಲರ್, ಸ್ಟೀವನ್ ಕುಲಾಸೋ, ಶೀಲಾ ಜತ್ತನ್ನ, ಡಿಯೋನ್ ಡಿಸೋಜ ಮತ್ತಿತರರು ಸಂತಾಪ ಸೂಚಿಸಿದ್ದಾರೆ.