ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರ ನಾಳೆ (ಸೆ.14) ಉಡುಪಿಗೆ

ಉಡುಪಿ ಸೆ.13 (ಉಡುಪಿ ಟೈಮ್ಸ್ ವರದಿ): ಅನಾರೋಗ್ಯದಿಂದ ನಿಧನರಾದ ಕಾಂಗ್ರೆಸ್ ನಾಯಕ ಕಾಂಗ್ರೆಸ್‍ನ ರಾಷ್ಟ್ರೀಯ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರ ನಾಳೆ ಉಡುಪಿಗೆ ತರಲಾಗುತ್ತಿದೆ.

ಉಡುಪಿಯ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಅವಕಾಶ ಕಲ್ಪಿಸಲಾಗಿದೆ.

ನಾಳೆ (ಸೆ.14) ಬೆಳಿಗ್ಗೆ 9 ಗಂಟೆಗೆ ಉಡುಪಿಯ ಶೋಕಮಾತೆ ಚರ್ಚ್ ಗೆ ಪಾರ್ಥಿವ ಶರೀರವನ್ನು ತಂದು ಅಲ್ಲಿ ಪ್ರಾರ್ಥನೆ ನೆರವೇರಿಸಿ ಬಳಿಕ 10 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

ಬಳಿಕ ಮಂಗಳೂರಿಗೆ ತೆಗೆದುಕೊಂಡು ಹೋಗಿ ನಂತರ ಸೆ.15 ರಂದು ಬೆಂಗಳೂರಿನ ಸೈಂಟ್ ಫ್ಯಾಟ್ರಿಕ್ ಚರ್ಚ್‍ನಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿದೆ. ಅಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕರು ಭೇಟಿ ನೀಡಿ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು,ಸೆ.13(ಉಡುಪಿ ಟೈಮ್ಸ್ ವರದಿ): ಹಿರಿಯ ಪ್ರಭಾವಿ ಕಾಂಗ್ರೆಸ್ ಮುಖಂಡರಾದ ಆಸ್ಕರ್ ಫೆರ್ನಾಂಡಿಸ್ ಅವರ ನಿಧನಕ್ಕೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಮಾತ್ರವಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ರಾಜಕೀಯ ನಾಯಕರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

ಹಿರಿಯ ನಾಯಕನನ್ನು ಕಳೆದುಕೊಂಡಿರುವ ಬಗ್ಗೆ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಹೆಚ್.ಕೆ.ಪಾಟೀಲ್, ಎಂ.ಬಿ. ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ, ಎಂ.ಎ ಗಫೂರ್, ಅಮೃತ್ ಶೆಣೈ, ಐವನ್ ಡಿಸೋಜಾ, ಮೊಯ್ದೀನ್ ಬಾವ, ಶಾಸಕ ಯು.ಟಿ ಖಾದರ್, ಜೆಆರ್ ಲೋಬೊ, ಜನಾರ್ಧನ ಪೂಜಾರಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಡುಪಿ ಶಾಸಕ ರಘುಪತಿ ಭಟ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸುನಿಲ್ ಕುಮಾರ್,  ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಮೂಲಕ ದೇಶಕ್ಕಾಗಿ ಮತ್ತು ಪಕ್ಷಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಆಸ್ಕರ್ ಫೆರ್ನಾಂಡಿಸ್ ಅವರು ತಮ್ಮ ದೂರದೃಷ್ಟಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳಿಂದಾಗಿ ಜನಮಾನಸದಲ್ಲಿ ಎಂದಿಗೂ ನೆನಪಿನಲ್ಲಿರುತ್ತಾರೆ ಎಂದು ಅಗಲಿದ ನಾಯಕನನ್ನು ಸ್ಮರಿಸಿದ್ದಾರೆ.

ಕಾಂಗ್ರೆಸ್‍ನ ಹಿರಿಯ ನಾಯಕ ಆಸ್ಕರ್ ಫೆರ್ನಾಂಡೀಸ್ ಅವರ ನಿಧನಕ್ಕೆ ಪೇಜಾವರ ಮಠದ ವಿಶ್ವ ಪ್ರಶನ್ನ ತೀರ್ಥ ಶ್ರೀಪಾದರು ಸಂತಾಪ: ಹಿರಿಯ ನಾಯಕರ ನಿಧನಕ್ಕೆ ದುಃಖ ವ್ಯಕ್ತಪಡಿಸಿರುವ ಅವರು, ಆಸ್ಕರ್ ಫೆರ್ನಾಂಡಿಸ್ ಅವರು ಯೋಗ ವಿದ್ಯೆಯಲ್ಲಿ ವಿಶೇಷ ಪರಿಣತಿ ಹೊಂದಿದ್ದರು, ಗೋವಿನ ಉತ್ಪನ್ನಗಳ ಔಷಧಿಯ ಮಹತ್ವಗಳ ಬಗ್ಗೆ ಸಂಸತ್ ಅಧಿವೇಶನದಲ್ಲಿ ಮಂಡಿಸಿರುವುದನ್ನು ಗಮನಿಸಿದ್ದೇನೆ. ಅವರು ಪೇಜಾವರ ಮಠ ಸೇರಿದಂತೆ ಉಡುಪಿ ಎಲ್ಲಾ ಮಠಗಳೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು, ಮಠದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಸಕ್ರಿಯರಾಗಿದ್ದವರು,ಅವರ ನಿಧನದಿಂದ ನಾಡು ಓರ್ವ ಮುತ್ಸದಿ ಯನ್ನು ಕಳೆದುಕೊಂಡತಾಗಿದೆ ಎಂದು ಸಂತಾಪಸೂಚಿಸಿದ್ದಾರೆ.

ಕಾಂಗ್ರೆಸ್‍ನ ಹಿರಿಯ ನಾಯಕ ಆಸ್ಕರ್ ಫೆರ್ನಾಂಡೀಸ್ ಅವರ ನಿಧನಕ್ಕೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಂಜೆ ಸಂತಾಪ: ಹಿರಿಯ ರಾಜಕೀಯ ನಾಯಕರ ನಿಧನಕ್ಕೆ ಸಂತಾಪ ಸೂಚಿಸಿ ಪ್ರಕಟಣೆ ಹೊರಡಿಸಿದ ಅವರು, ಸರಳ ಸಜ್ಜನ ನಾಯಕರಾಗಿ ರಾಷ್ಟ್ರ ಮಟ್ಟದಲ್ಲಿ ತಮ್ಮ ಛಾಪನ್ನು ಬೆಳೆಸಿಕೊಂಡಿದ್ದ ಅವರು ಉಡುಪಿ ಸಂಸದರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರ ಸೇವೆ ಸ್ಮರಣೀಯ. ದೇವರು ಅವರಿಗೆ ಚಿರಶಾಂತಿ ಕರುಣಿಸಲಿ ಹಾಗೂ ಅವರ ಬಂಧು ಮಿತ್ರರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದ್ದಾರೆ.

ಉಡುಪಿ ಬಿಷಪ್‌ ಸಂತಾಪ: ಕರಾವಳಿ ಕರ್ನಾಟಕದ ಅತ್ಯಂತ ಗೌರವಾನ್ವಿತ ರಾಜಕಾರಣಿ, ಜನಾನುರಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಓಸ್ಕರ್ ಫೆರ್ನಾಂಡಿಸ್‍ರವರು ಅಸ್ತಂಗತರಾದ ಸುದ್ಧಿಯು ನಮ್ಮನ್ನು ಅತೀವ ದುಃಖಿತರನ್ನಾಗಿಸಿದೆ.

ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವಾಗ, ಅವರ ಕುಟುಂಬದ ಸದಸ್ಯರಿಗೆ ಈ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿ ಅವರನ್ನು ಹೃತ್ಪೂರ್ವಕವಾಗಿ ಸಂತೈಸುತ್ತೇವೆ. ಉಡುಪಿಯ ದೇಶಭಕ್ತ ಫೆರ್ನಾಂಡಿಸ್ ಕುಟುಂಬದಲ್ಲಿ ಜನಿಸಿ, ಸಮುದಾಯದ ನಾಯಕನಾಗಿ, ಉಡುಪಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ 1980 ರಿಂದ 1996 ರವರೆಗೆ ಸತತವಾಗಿ ಐದು ಬಾರಿ ಗೆದ್ದು ಬಂದು ದೇಶಸೇವೆಯಲ್ಲಿ ತಮ್ಮನ್ನೇ ಸಕ್ರಿಯವಾಗಿ ತೊಡಗಿಸಿಕೊಂಡವರು ಓಸ್ಕರ್ ಫೆರ್ನಾಂಡಿಸ್‍ರವರು.

ಅನಂತರ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. 2004 ಮತ್ತು 2009 ರ ಡಾ| ಮನಮೋಹನ್ ಸಿಂಗ್‍ರವರ ನಾಯಕತ್ವದ ಯುಪಿಎ ಕೇಂದ್ರ ಸರ್ಕಾರದಲ್ಲಿ ರಾಜ್ಯ ಮಂತ್ರಿಯಾಗಿ ಅಂಕಿ ಅಂಶಗಳು, ರಸ್ತೆ ಮತ್ತು ಸಾರಿಗೆ, ಯುವಜನ ಮತ್ತು ಕ್ರೀಡೆ, ಶ್ರಮ ಮತ್ತು ಉದ್ಯೋಗ ಇನ್ನಿತರ ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು.ಸಮರ್ಥ ನಾಯಕರೂ, ಬಹುಮುಖ ಪ್ರತಿಭೆಯೂ ಆಗಿದ್ದ ಆಸ್ಕರ್ ಫೆರ್ನಾಂಡಿಸ್‍ರವರು ಎಲ್ಲರನ್ನು ಆಕರ್ಷಿಸುವ ವ್ಯಕ್ತಿತ್ತವುಳ್ಳವರು. ತಮ್ಮ ರಾಜಕೀಯ ಪ್ರಭಾವದಿಂದ ಕಷ್ಟದಲ್ಲಿ ಸಿಲುಕಿಕೊಂಡ ಬಹಳಷ್ಟು ಜನರಿಗೆ ಸಹಾಯಹಸ್ತವನ್ನು ನೀಡಿ ಮೇಲೆತ್ತಿದವರು.

ರಾಜಕೀಯ ಜೀವನದುದ್ದಕ್ಕೂ ಸುಸಂಸ್ಕೃತರಾಗಿ ಜೀವಿಸಿದ್ದರು.ಅವರು ಕ್ರೈಸ್ತ ಧರ್ಮದ ಅನುಯಾಯಿಗಳಾಗಿದ್ದರೂ, ಇತರ ಧರ್ಮದ ನಾಯಕರು ಹಾಗೂ ಜನರೊಂದಿಗೆ ಅನ್ಯೋನ್ಯ ಸಂಬಂಧವನ್ನು ಇರಿಸಿಕೊಂಡಿದ್ದರು. ಉಡುಪಿಯನ್ನು ಪ್ರತಿನಿಧಿಸುವ ನಾಯಕರಾಗಿ ಅವರು ಉಡುಪಿ ಕೃಷ್ಣ ಮಠದೊಂದಿಗೆ ನಿಕಟ ಸಂಪರ್ಕವನ್ನು ಇರಿಸಿಕೊಂಡಿದ್ದರು. ಆಸ್ಕರ್ ಫೆರ್ನಾಂಡಿಸ್‍ರವರ ಅಗಲುವಿಕೆಯಿಂದ ಕರಾವಳಿ ಕರ್ನಾಟಕದ ಬಲಿಷ್ಠ ಕೊಂಡಿಯೊಂದು ಕಳಚಿಕೊಂಡಿದೆ. ದಿವಂಗತರ ಆತ್ಮಕ್ಕೆ ದಯಾಮಯ ಭಗವಂತ ಚಿರಶಾಂತಿಯನ್ನು ದಯಪಾಲಿಸಲಿ. ಅವರ ಅಗಲಿಕೆಯಿಂದ ದುಃಖತಪ್ತ ಕುಟುಂಬಕ್ಕೆ ಆ ಭಗವಂತನೇ ಸಾಂತ್ವನವಾಗಲಿ ಎಂದು ಪ್ರಾರ್ಥಿಸುತ್ತೇನೆ.

1 thought on “ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರ ನಾಳೆ (ಸೆ.14) ಉಡುಪಿಗೆ

Leave a Reply

Your email address will not be published. Required fields are marked *

error: Content is protected !!