ಹಳ್ಳಿಯಿಂದ ದಿಲ್ಲಿಯವರೆಗೆ ಪ್ರಜ್ವಲಿಸಿದ ನಾಯಕ ಇನ್ನು ನೆನಪು ಮಾತ್ರ…

ಉಡುಪಿ (ಉಡುಪಿ ಟೈಮ್ಸ್ ವರದಿ): ಹಳ್ಳಿಯಿಂದ ದಿಲ್ಲಿಯವರೆಗೆ ಪ್ರಜ್ವಲಿಸಿದ ದೇಶದ ಪ್ರಭಾವಿ ರಾಜಕೀಯ ಮುಖಂಡ, ಗಾಂಧಿ ಕುಟುಂಬದ ಆಪ್ತ ಹಾಗೂ ಅವಿಭಜಿತ ಜಿಲ್ಲೆಯ ಕಾಂಗ್ರೆಸ್ ಹೈಕಮಾಂಡ್ ಎಂದೇ ಹೆಸರುವಾಸಿಯಾಗಿದ್ದ ಸರಳ ಸ್ವಭಾವದ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಇಂದು ನಿಧನರಾಗಿದ್ದು, ಅವಿಭಜಿತ ಜಿಲ್ಲೆ ಮಾತ್ರವಲ್ಲದೆ ದೇಶ ಕಂಡ ಅಪ್ರತಿಮ ನಾಯಕನೋರ್ವನನ್ನು ಕಳಕೊಂಡಂತಾಗಿದೆ.

ಡಾ. ಆಸ್ಕರ್ ಫೆರ್ನಾಂಡಿಸ್ ಅವರು 1941ರ ಮಾ.27 ರಂದು ಜನಿಸಿದರು.  ಕಥೋಲಿಕ ಕ್ರೈಸ್ತರಾಗಿದ್ದ ಆಸ್ಕರ್, ಫೆರ್ನಾಂಡೀಸ್ ಕುಟುಂಬದ 12 ಮಕ್ಕಳಲ್ಲಿ ಒಬ್ಬರು. ಬಾಲ್ಯದಲ್ಲಿ ಅವರು ಚರ್ಚ್‍ನಲ್ಲಿ ನಡೆಯುವ ಬಲಿ ಪೂಜೆಯಲ್ಲಿ ಧರ್ಮಗುರುಗಳಿಗೆ ಸಹಾಯ ಮಾಡುವ ಬಲಿಪೀಠದ ಹುಡುಗನಾಗಿ ಸೇವೆ ಸಲ್ಲಿಸುತ್ತಿದ್ದರು. ಯುವವಸ್ಥೆಗೆ ತಲುಪಿದ ನಂತರದ ದಿನಗಳಲ್ಲಿ ಅವರು ಚರ್ಚ್‍ನ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಕೊಳ್ಳುತ್ತಿದ್ದರು.

1981ರ ಆ. 26, ರಂದು ಬ್ಲಾಸಮ್ ಮಥಿಯಾಸ್ ಪ್ರಭು ಅವರನ್ನು ಆಸ್ಕರ್ ವಿವಾಹವಾದರು. ಇವರಿಗೆ ಓಷಾನ್ ಮತ್ತು ಓಶಾನಿ ಎಂಬ ಇಬ್ಬರು ಮಗ ಮತ್ತು ಮಗಳು ಇದ್ದಾರೆ. ಯುವ ಕಾಂಗ್ರೆಸ್ ಸಹಿತ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಆಸ್ಕರ್, ಪ್ರಸ್ತುತ ರಾಜ್ಯ ಸಭಾ ಸದಸ್ಯರಾಗಿದ್ದು, ದೇಶದ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಹಿರಿಯ ಮುಖಂಡರಾಗಿರುವ ಇವರು, ,ಪ್ರಸ್ತುತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಆಪ್ತರಲ್ಲಿ ಒಬ್ಬರು. ಕಾಂಗ್ರೆಸ್ ಪಕ್ಷದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಮುಖರಲ್ಲಿ ಇವರು ಅಗ್ರ ಸಾಲಿನ ನಾಯಕರು.

ಆಸ್ಕರ್ ಫೆರ್ನಾಂಡಿಸ್  ಯುಪಿಎ ಸರ್ಕಾರದಲ್ಲಿ ಭಾರತ ಸರ್ಕಾರದ ಸಾರಿಗೆ, ರಸ್ತೆ ಮತ್ತು ಹೆದ್ದಾರಿಗಳು ಹಾಗೂ ಕಾರ್ಮಿಕ ಮತ್ತು ಉದ್ಯೋಗದ ಕೇಂದ್ರ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಇವರು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಡಾ. ಮನಮೋಹನ್ ಸಿಂಗ್ ಅವರ ಯುಪಿಎ ಸರ್ಕಾರದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವರಾಗಿದ್ದರು. ಇದರೊಂದಿಗೆ ರಾಜೀವ್ ಗಾಂಧಿಯವರ ಸಂಸದೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇಂದಿರಾಗಾಂಧಿ, ರಾಜೀವ್ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರು ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.

1980 ರಲ್ಲಿ ಕರ್ನಾಟಕದ ಉಡುಪಿ ಕ್ಷೇತ್ರದಿಂದ 7 ನೇ ಲೋಕಸಭೆಗೆ ಆಯ್ಕೆಯಾಗಿದ್ದರು. 1984, 1989, 1991 ಮತ್ತು 1996 ರಲ್ಲಿ ಅದೇ ಕ್ಷೇತ್ರದಿಂದ ಮತ್ತೆ ಲೋಕಸಭೆಗೆ ಆಯ್ಕೆಯಾದರು. ನಂತರ 1998 ರಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಅವರು, 2004 ರಲ್ಲಿ ಅವರು ಮತ್ತೆ ರಾಜ್ಯಸಭೆಗೆ ಆಯ್ಕೆಯಾದರು. 2004 ರಿಂದ 2009 ರವರೆಗೆ ಕೇಂದ್ರ ಸಚಿವರಾಗಿದ್ದ ಅಸ್ಕರ್, ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ, ಎನ್‍ಆರ್‍ಐ ವ್ಯವಹಾರಗಳು, ಯುವ ಮತ್ತು ಕ್ರೀಡಾ ವ್ಯವಹಾರಗಳು ಹಾಗೂ ಕಾರ್ಮಿಕ ಮತ್ತು ಉದ್ಯೋಗದಂತಹ ಹಲವಾರು ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಇಷ್ಟೇ ಅಲ್ಲದೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಕೌನ್ಸಿಲ್‍ನ ಸದಸ್ಯರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದರು.

ಸಂಸತ್ ನಲ್ಲಿ ‘ಓ ಮಗಾ ಕೊರಗ’ ಎಂಬ ತುಳು ಪದ್ಯವನ್ನು ಹಾಡುವುದರ ಮೂಲಕ ತುಳು ಅಭಿಮಾನವನ್ನು ಸಂಸತ್ ನಲ್ಲಿ ಪ್ರದರ್ಶಿಸಿದ್ದ ಆಸ್ಕರ್ ಫೆರ್ನಾಂಡಿಸ್ ರವರಲ್ಲಿ ಬಾಳಷ್ಟು ಪ್ರತಿಭೆಗಳಿದ್ದವು. ಈಜು ಪಟುವಾಗಿದ್ದ ಇವರು ಯೋಗ ಮತ್ತು ಮೌತ್ ಆರ್ಗನ್ ನಲ್ಲಿ ವಿಶೇಷ ಪರಿಣಿತಿಯನ್ನು ಹೊಂದಿದ್ದರು. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ಮತ್ತು ದೇಶದ ವಿವಿಧ ಸಮಸ್ಯೆಗಳ ಬಗ್ಗೆ ಸಂಸತ್ ನಲ್ಲಿ ಚರ್ಚಿಸುತ್ತಿದ್ದ ಅಸ್ಕರ್ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದರು.

ಕೆಲವು ಸಮಯಗಳಿಂದ ಅನಾರೋಗ್ಯಕ್ಕೀಡಾಗಿದ್ದ ಇವರು,ಕಳೆದ ಒಂದೂವರೆ ತಿಂಗಳಿನಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!