ವ್ಯಾಜ್ಯಗಳನ್ನು ಮಧ್ಯಸ್ಥಿಕೆಗೆ ವರ್ಗಾಯಿಸಲು ವಕೀಲರ ಸಮ್ಮತಿ ಅವಶ್ಯಕತೆ ಇಲ್ಲ- ಹೈಕೋರ್ಟ್ ಅದೇಶ

ಬೆಂಗಳೂರು, ಸೆ.13: ವ್ಯಾಜ್ಯಗಳನ್ನು ಮಧ್ಯಸ್ಥಿಕೆಗೆ ವರ್ಗಾಯಿಸಲು ವಕೀಲರ ಸಮ್ಮತಿ ಅವಶ್ಯಕತೆ ಇಲ್ಲ ಎಂದು ಹೈಕೋರ್ಟ್ ಅದೇಶ ನೀಡಿದೆ.

ವ್ಯಾಜ್ಯವೊಂದಕ್ಕೆ ಸಂಬಂಧಿಸಿ, ತಮ್ಮ ವ್ಯಾಜ್ಯವನ್ನು ಮೀಡಿಯೇಷನ್ (ಮಧ್ಯಸ್ಥಿಕೆ) ಮೂಲಕ ಇತ್ಯರ್ಥಪಡಿಸಿಕೊಳ್ಳಲು ನೀಡಿದ್ದ ಅವಧಿಯನ್ನು ಕಡಿತಗೊಳಿಸಿದ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅಮಲಾಪೋ ಮಾರಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಪೀಠ, ಮಧ್ಯಸ್ಥಿಕೆ ನಿಯಮಗಳ ಅನುಸಾರ ಮೀಡಿಯೇಷನ್ ಮೂಲಕ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು 60 ದಿನಗಳ ಕಾಲಾವಕಾಶವನ್ನು ನ್ಯಾಯಾಲಯಗಳು ನೀಡಬೇಕು. ಆ ಅವಧಿಯನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸುವಂತಿಲ್ಲ ಎಂದು ಹೇಳಿದೆ. ಇದೇ ವೇಳೆ ವ್ಯಾಜ್ಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ವೇಳೆ ಮಧ್ಯಸ್ಥಿಕೆಗೆ ವರ್ಗಾಯಿಸಲು ನ್ಯಾಯಾಲಯಗಳು ವಕೀಲರ ಅಥವಾ ಕಕ್ಷಿದಾರರ ಸಮ್ಮತಿ ಪಡೆಯಬೇಕಾಗಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

2010ರಲ್ಲಿ ಸುಪ್ರೀಂಕೋರ್ಟ್ ಅಫ್ಕಾನ್ ಕಂಪೆನಿ ಪ್ರಕರಣದಲ್ಲಿ ಹೊರಗಿಟ್ಟಿರುವ ಪ್ರಕರಣಗಳನ್ನು ಬಿಟ್ಟು ಉಳಿದೆಲ್ಲಾ ಪ್ರಕರಣಗಳನ್ನು ನ್ಯಾಯಾಲಯ ಅಪರಾಧ ದಂಡ ಸಂಹಿತೆ ಸೆಕ್ಷನ್ 89ರ ಪ್ರಕಾರ ವ್ಯಾಜ್ಯಗಳನ್ನು ಮಧ್ಯಸ್ಥಿಕೆಗೆ ವರ್ಗಾಯಿ ಸಬಹುದು. ಅದಕ್ಕೆ ವ್ಯಾಜ್ಯಗಳ ಕಕ್ಷಿದಾರರು ಅಥವಾ ವಕೀಲರ ಒಪ್ಪಿಗೆ ಬೇಕಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಕರ್ನಾಟಕ ನಾಗರಿಕ ಸಂಹಿತೆ (ಮಧ್ಯಸ್ಥಿಕೆ) ನಿಯಮ 2005ರ ಅನ್ವಯ 60 ದಿನ ನೀಡಬೇಕು. ಅಗತ್ಯ ಬಿದ್ದರೆ ಅವಧಿ ವಿಸ್ತರಣೆ ಮಾಡಬಹುದು. ಒಂದು ವೇಳೆ ಪಕ್ಷಗಾರರು ಕೋರ್ಟ್ ಆದೇಶದಂತೆ ಮಧ್ಯಸ್ಥಿಕೆಗೆ ಬರಲಿಲ್ಲ ಎಂದಾಗ, ನ್ಯಾಯಾಲಯ ಮೀಡಿಯೇಷನ್ ನಿಯಮ 13ರ ಪ್ರಕಾರ ಕಕ್ಷಿದಾರರಿಗೆ ದಂಡ ವಿಧಿಸಬಹುದು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ. ಹಾಗೂ 60 ದಿನಗಳಲ್ಲಿ ಕೇಸ್ ಕಡತ ಮಧ್ಯಸ್ಥಿಕೆ ಕೇಂದ್ರಕ್ಕೆ ವರ್ಗಾಯಿಸಲು ಹಿಡಿಯುವ ಸಮಯ, ಮಧ್ಯಸ್ಥಗಾರರ ನೇಮಕಕ್ಕೆ ಹಿಡಿಯುವ ಅವಧಿಯನ್ನು 60 ದಿನಗಳಿಂದ ಹೊರಗಿಡಬೇಕು. ನಿಗದಿತ ಅವಧಿಯಲ್ಲಿ ಮಧ್ಯಸ್ಥಿಕೆ ಪೂರ್ಣಗೊಳ್ಳದಿದ್ದಾಗ, ಉಭಯ ಕಕ್ಷಿದಾರರ ಮನವಿ ಮೇರೆಗೆ ಸಮಯವನ್ನು ಮತ್ತೆ 30 ದಿನಗಳ ಕಾಲ ವಿಸ್ತರಿಸಲು ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ.

Leave a Reply

Your email address will not be published. Required fields are marked *

error: Content is protected !!