ಗುಜರಾತ್’ನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆ
ಗಾಂಧಿನಗರ: ಗುಜರಾತ್‍ನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆಯಾಗಿದ್ದಾರೆ.
ಶನಿವಾರ ವಿಜಯ್ ರೂಪಾಣಿಯವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ನಂತರ ಮುಖ್ಯಮಂತ್ರಿ ಹುದ್ದೆ ಯಾರಿಗೆ ದಕ್ಕಲಿದೆ ಎನ್ನುವುದು ಬಿಸಿ ಬಿಸಿ ಚರ್ಚೆಯಾಗಿತ್ತು. ಇದೀಗ ಕುತೂಹಲಕ್ಕೆ ತೆರೆ ಬಿದ್ದಿದ್ದು ಭೂಪೇಂದ್ರ ಪಟೇಲ್ ಅವರು ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ.
ಮುಖ್ಯಮಂತ್ರಿ ರೇಸ್ ನಲ್ಲಿ ಪ್ರಮುಖವಾಗಿ ಮೂರು ಜನರ ಹೆಸರುಗಳು ರೇಸ್ ನಲ್ಲಿತ್ತು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಹಾಗೂ ಕ್ಯಾಬಿನೆಟ್ ಮಂತ್ರಿ ಆರ್ .ಸಿ ಫಾಲ್ದು ಅವರ ಹೆಸರುಗಳು ಮುಖ್ಯಮಂತ್ರಿ ಸ್ಥಾನದ ರೇಸ್‍ನಲ್ಲಿದ್ದವು.
ಇಂದು ರಾಜ್ಯಕ್ಕೆ ಆಗಮಿಸಿದ ಬಿಜೆಪಿ ವರಿಷ್ಠರು ಸಭೆ ನಡೆಸಿದರು. ಬಳಿಕ ಮಾಧ್ಯಮಗೋಷ್ಠಿಯಲ್ಲಿ ನೂತನ ಸಿಎಂ ಹೆಸರನ್ನು ಘೋಷಿಸಿದರು.
ವಿಜಯ್ ರೂಪಾಯಿ ಸ್ವಯಂ ಪ್ರೇರಣೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯಾವುದೇ ಒತ್ತಡದಿಂದಾಗಿ ಈ ನಿರ್ಧಾರವನ್ನು ಅವರು ಕೈಗೊಂಡಿಲ್ಲ ಎಂದು ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಹೇಳಿದ್ದಾರೆ.