ಕಾರ್ಕಳ ಮತಾಂತರ ವಿವಾದ: ಸಂಘಟನೆಯ ಕಾರ್ಯಕರ್ತರು ಹಾಗೂ ಬೆನೆಡಿಕ್ಟ್ ಸಹಿತ 31 ಮಂದಿ ವಿರುದ್ಧ ಪ್ರಕರಣ
ಕಾರ್ಕಳ, ಸ.11: ಇಲ್ಲಿನ ಮತಾಂತರ ವಿವಾದಕ್ಕೆ ಸಂಬಂಧಿಸಿ ಹಿಂದು ಸಂಘಟನೆಯ ಕಾರ್ಯಕರ್ತರು ಹಾಗೂ ಅಕ್ರಮವಾಗಿ ಮತಾಂತರದಲ್ಲಿ ತೊಡಗಿಸಿಕೊಂಡಿದ್ದ ಹಾಳೆಕಟ್ಟೆಯ ಬೆನೆಡಿಕ್ಟ್ ಸಹಿತ 31 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಿನ್ನೆ ಕುಕ್ಕುಂದೂರು ಗ್ರಾಮದ ನಕ್ರೆಯ ಪ್ರಗತಿ ಸೆಂಟರ್‌ನ ಮತಾಂತರ ಕೇಂದ್ರಕ್ಕೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ , ಕುಂಟಾಡಿಯ ಸುನೀಲ್ ಎಂಬವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, “ನಾನು ಆರ್ಥಿಕವಾಗಿ ಸ್ವಲ್ಪ ಸಮಸ್ಯೆಯಲ್ಲಿ ಇದ್ದುದನ್ನು ತಿಳಿದು ಬೆನೆಡಿಕ್ಟ್ ಎಂಬವರು 2 ತಿಂಗಳ ಹಿಂದೆ ಬಸ್ ಸ್ಟ್ಯಾಂಡ್ ನಲ್ಲಿ ಭೇಟಿಯಾಗಿ ವಿಚಾರಿಸಿ ಹೋಗಿದ್ದರು. ಬೆನೆಡಿಕ್ಟ್ ಮತ್ತು ಇನ್ನೊರ್ವರು ನನ್ನ ಮನೆಗೆ ಆಗಮಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಎಲ್ಲಾ ಕಷ್ಟಗಳು ಪರಿಹಾರ ವಾಗುತ್ತದೆ, ಹಿಂದೂ ಧರ್ಮದ ಸಾವಿರಾರು ದೇವರುಗಳಿರುತ್ತಾರೆ. ನೂರಾರು ಜಾತಿಗಳು ಮೇಲು ಕೀಳೆಂಬ ಜಾತಿಗಳಿರುತ್ತವೆ ಎಂದು ಹಿಂದೂ ಧರ್ಮ ಮತ್ತು ದೇವರುಗಳ ಬಗ್ಗೆ ಅಪಹಾಸ್ಯ ಮತ್ತು ನಿಂದನೆ ಮಾಡಿ ಗಣೇಶ ಚತುರ್ಥಿಯ ದಿನದಂದು ನಕ್ರೆಯ ಪ್ರಗತಿ ಸೆಂಟರ್‌ಗೆ ಬರುವಂತೆ ನನಗೆ ತಿಳಿಸಿದ್ದರು. ಅದರಂತೆ ಶುಕ್ರವಾರ ಅಲ್ಲಿಗೆ ಹೋದಾಗ ಆ ಮನೆಯಲ್ಲಿ ಸುಮಾರು 70 ಮಂದಿ ಸೇರಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಹಾಳೆಕಟ್ಟೆಯ ಬೆನಡಿಕ್ಟ್ ವಾರ್ತಿಕ್ ಎಂವರು ಕೂಡಾ ಹಿಂದು ಪರ ಸಂಘಟನೆಯ ಕಾರ್ಯಕರ್ತರ ವಿರುದ್ಧ ದೂರು ನೀಡಿದ್ದು, ಸುಮಾರು 30 ಜನ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಶುಕ್ರವಾರದಂದು ಕುಕ್ಕುಂದೂರು ಗ್ರಾಮದ ನಕ್ರೆ ಬಳಿ ಮಂಗಳೂರು ಕೆಎಸಿಇಎಸ್ ಎಂಬ ಸಂಸ್ಥೆ ವತಿಯಿಂದ ನಡೆಸುವ ಪ್ರಗತಿ ಟ್ರಸ್ಟ್‌ನಲ್ಲಿ ಇತರೇ ವ್ಯಕ್ತಿಗಳೊಂದಿಗೆ ಸೇರಿ ಪ್ರಾರ್ಥನೆ ನಡೆಸುತ್ತಿರುವ ಸಂದರ್ಭ ಸುಮಾರು ಸುಮಾರು 30 ಜನ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಪ್ರಾರ್ಥನೆ ನಡೆಸುತ್ತಿದ್ದ ಕಟ್ಟಡಕ್ಕೆ ಪ್ರವೇಶಿಸಿ ಏಕಾಏಕಿ ದಾಳಿ ನಡೆಸಿದ್ದಾರೆ. ಪ್ರಾರ್ಥನೆ ನಡೆಸುತ್ತಿದ್ದ ಹೆಂಗಸರು, ಗಂಡಸರು ಮತ್ತು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಒರ್ವ ಹೆಂಗಸು ಧರಿಸಿದ್ದ ರವಿಕೆಯ ಕೈಯನ್ನು ಹರಿದಿದ್ದಾರೆ. ಪ್ರಾರ್ಥನೆ ನಡೆಸುತ್ತಿದ್ದ ಹಾಳೆಕಟ್ಟೆಯ ಬೆನಡಿಕ್ಟ್ ವಾರ್ತಿಕ್ ಮತ್ತು ಇತರರಿಗೆ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.