ಮಂಗಳೂರು: ಕಾರ್ಮಿಕರ ಕೊರತೆ, ಮೇಸ್ತ್ರಿಗಳಿಗೆ ವಿಮಾನಯಾನ ಭಾಗ್ಯ!
ಮಂಗಳೂರು: ಲಾಕ್‌ಡೌನ್ ಬಳಿಕ ನಿರ್ಮಾಣ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ಉಂಟಾಗಿದ್ದು, ನಗರದ ಮೆರಿಯನ್ ಪ್ರಾಜೆಕ್ಟ್ಸ್ ಸಂಸ್ಥೆಯು ಕೋಲ್ಕತ್ತದಿಂದ ಐವರು ಮೇಸ್ತ್ರಿಗಳನ್ನು ವಿಮಾನದ ಮೂಲಕ ನಗರಕ್ಕೆ ಕರೆಸಿಕೊಂಡಿದೆ.
ಕ್ರೆಡೈ ಅಧ್ಯಕ್ಷ ನವೀನ್ ಕಾರ್ಡೋಜಾ ಅವರು ತಮ್ಮ ಮೆರಿಯನ್ ಪ್ರಾಜೆಕ್ಸ್ಟ್ ಸಂಸ್ಥೆಯ ನಿರ್ಮಾಣ ಕಾಮಗಾರಿಗಾಗಿ ಕೋಲ್ಕತ್ತದಿಂದ ಐವರು ಪರಿಣತ ಮೇಸ್ತ್ರಿಗಳನ್ನು ಕರೆಸಿಕೊಂಡಿದ್ದಾರೆ. ಕೋಲ್ಕತ್ತದಿಂದ ಬೆಂಗಳೂರಿಗೆ ವಿಮಾನ ಹಾಗೂ ಅಲ್ಲಿಂದ ಪ್ರತ್ಯೇಕ ವಾಹನದ ಮೂಲಕ ನಗರಕ್ಕೆ ಕರೆಸಿಕೊಂಡಿದ್ದಾರೆ.
‘ನಿರ್ಮಾಣ ಕ್ಷೇತ್ರದಲ್ಲಿ ಉತ್ತರ ಹಾಗೂ ಈಶಾನ್ಯ ಭಾರತದ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಅವರು ತಮ್ಮ ಊರುಗಳಿಗೆ ತೆರಳಿದ್ದಾರೆ. ವಾಪಸ್ ಬರಲು ಸೌಲಭ್ಯಗಳಿಲ್ಲ. ಅದಕ್ಕಾಗಿ ಮುಕ್ತಾಯ ಹಂತದಲ್ಲಿರುವ ಕಟ್ಟಡಗಳನ್ನು ಪೂರ್ಣಗೊಳಿಸಲು ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ನವೀನ್ ಕಾರ್ಡೋಜಾ ತಿಳಿಸಿದರು.
‘ಈಗಾಗಲೇ ನಾಲ್ಕೈದು ತಿಂಗಳಿನಿಂದ ಕಾಮಗಾರಿ ಸ್ಥಗಿತಗೊಂಡಿದ್ದು,
ಹೂಡಿಕೆ ಮೇಲಿನ ಬಡ್ಡಿ, ಇತರ ವೆಚ್ಚಗಳು ಹೆಚ್ಚಾಗುತ್ತಿವೆ. ನಿಗದಿತ ಸಮಯಕ್ಕೆ ಕಟ್ಟಡ ಪೂರ್ಣಗೊಳಿಸದಿದ್ದರೂ ನಷ್ಟವೇ, ಖರೀದಿದಾರರಿಗೆ ಕೊಟ್ಟ ಮಾತನ್ನೂ ಉಳಿಸಿಕೊಳ್ಳಬೇಕಾಗಿದೆ’ ಎಂದು ವಿವರಿಸಿದರು.
‘ನಮ್ಮ ಸಂಸ್ಥೆಯಲ್ಲಿ ಸುಮಾರು 300 ಮಂದಿ ಕಾರ್ಮಿಕರಿದ್ದು, ಈಗ 170 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನೂ ಕನಿಷ್ಠ 70 ಮಂದಿ ಬೇಕು. ಊರಿಗೆ ತೆರಳಿದ್ದ ಕಾರ್ಮಿಕರೂ ವಾಪಸ್ ಬರಲು ಸಿದ್ಧರಾಗಿದ್ದಾರೆ. ಅಲ್ಲಿ ಕೆಲಸದ ಕೊರತೆ ಇದೆ. ಅದಕ್ಕಾಗಿ ಕೋಲ್ಕತ್ತದಿಂದ ಮಂಗಳೂರಿಗೆ ಬಾಡಿಗೆ ವಿಮಾನದ ಮೂಲಕ ಕಾರ್ಮಿಕರನ್ನು ಕರೆಸಿಕೊಳ್ಳಲು ಸಿದ್ಧತೆ ಮಾಡುತ್ತಿದ್ದೇವೆ’ ಎಂದರು.
‘ಒಬ್ಬರು ಕಾರ್ಮಿಕರಿಗೆ ಸುಮಾರು ₹7 ಸಾವಿರ ವೆಚ್ಚ ಆಗಬಹುದು. ಆದರೆ, ಮರಳಿನ ಕೊರತೆಯಿಂದಲೂ ನಿರ್ಮಾಣ ಕ್ಷೇತ್ರ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಕಾಮಗಾರಿ ಸ್ಥಗಿತಗೊಂಡರೆ ಅದಕ್ಕಿಂತಲೂ ಹೆಚ್ಚು ನಷ್ಟವಾಗುವ ಸಾಧ್ಯತೆ ಇದೆ’ ಎಂದರು.
ಕಾರ್ಮಿಕರ ಕೊರತೆ ಜೊತೆ ಮರಳಿನ ಕೊರತೆಯೂ ನಿರ್ಮಾಣ ಕ್ಷೇತ್ರಕ್ಕೆ ಹಿನ್ನಡೆ ಉಂಟು ಮಾಡಿದೆ ಎಂದಿದ್ದಾರೆ.