ಕೆಪಿಸಿಸಿ ವತಿಯಿಂದ ಈಶ್ವರ್ ಮಲ್ಪೆಗೆ ಆಂಬ್ಯುಲೆನ್ಸ್ ಹಸ್ತಾಂತರ
ಉಡುಪಿ ಸೆ.11(ಉಡುಪಿ ಟೈಮ್ಸ್ ವರದಿ): ಕೆಪಿಸಿಸಿ ವತಿಯಿಂದ ಕೊಡ ಮಾಡಲಾದ ಆಂಬ್ಯುಲೆನ್ಸ್ ನ್ನು ಮಲ್ಪೆಯ ಮೀನುಗಾರ ಸಮುದಾಯಕ್ಕೆ ಹಸ್ತಾಂತರಿಸಲಾಯಿತು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ನಿನ್ನೆ ಕಾಂಗ್ರೆಸ್ ಭವನದ ಮುಂಭಾಗ ಆಂಬ್ಯುಲೆನ್ಸ್ ನ ಕೀಯನ್ನು ನೀಡುವ ಮೂಲಕ ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಅವರು, ಮಲ್ಪೆ ಬಂದರಿನಲ್ಲಿ ಸಾವಿರಾರು ಬೋಟ್ ಗಳಿವೆ, ಸಾವಿರಾರು ಮೀನುಗಾರರಿದ್ದಾರೆ. ಆದರೆ ಅವಘಡಗಳಾದಾಗ, ಯಾರಾದರೂ ನೀರಿಗೆ ಬಿದ್ದಾಗ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸು ವ್ಯವಸ್ಥೆ ಗಳಿರಲಿಲ್ಲ. ಇದನ್ನು ಮನಗಂಡು ಡಿಕೆ ಶಿವಕುಮಾರ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಸದ್ಯ ತಾತ್ಕಾಲಿಕವಾಗಿ ಈ ಅಂಬುಲೆನ್ಸ್ ನೀಡಲಾಗಿದ್ದು ಮುಂದೆ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಅವರು, ಅನುದಾನದಲ್ಲಿ ಹೊಸ ಆಂಬ್ಯುಲೆನ್ಸ್ ಗೆ ಅನುದಾನ ಬಿಡುಗಡೆ ಮಾಡಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದರು.
ಗಣೇಶ ಚತುರ್ಥಿ ದಿನವೇ ಆಂಬ್ಯುಲೆನ್ಸ್ ಹಸ್ತಾಂತರ ಮಾಡಿದ್ದೇವೆ. ಆಂಬ್ಯುಲೆನ್ಸ್ ಉಪಯೋಗಿಸುವ ಪ್ರಸಂಗ ಬಾರದೇ ಇರಲಿ, ಅವಘಡಗಳು ಸಂಭವಿಸದಿರಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್, ನಗರಸಭೆಯ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಾಯಕರಾದ ಯತೀಶ್ ಕರ್ಕೇರಾ, ಸತೀಶ್ ಅಮೀನ್ ಪಡುಕೆರೆ, ಡಿಯೋನ್ ಡಿಸೋಜಾ, ಸಾಯಿರಾಜ್, ಗಣೇಶ್ ನೇರ್ಗಿ, ಕೇಶವ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಈ ಮೊದಲು ಡಿ.ಕೆ ಶಿವಕುಮಾರ್ ಮಲ್ಪೆಗೆ ಬಂದಾಗ ಮೀನುಗಾರ ಸಮುದಾಯದವರು ಮತ್ತು ನೀರಿನಲ್ಲಿ ಬಿದ್ದವರನ್ನು ರಕ್ಷಣೆ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಈಶ್ವರ್ ಮಲ್ಪೆ ಆಂಬ್ಯುಲೆನ್ಸ್ ನ ಬೇಡಿಕೆ ಇಟ್ಟಿದ್ದರು. ಅದರಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಂಬ್ಯುಲೆನ್ಸ್ ಕೊಡಮಾಡಿದ್ದಾರೆ.