ಮೂರೇ ದಿನ ಗಣೇಶೋತ್ಸವ ಆಚರಿಸಲು ಮಾರ್ಗಸೂಚಿ ಹೊರಡಿಸಿದ ಬಿಬಿಎಂಪಿ
ಬೆಂಗಳೂರು: ಗಣೇಶೋತ್ಸವವನ್ನು ಐದು ದಿನಗಳ ಕಾಲ ಆಚರಿಸಲು ಸರ್ಕಾರ ಅನುಮತಿ ನೀಡಿದ್ದರೂ,ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಮೂರು ದಿನಗಳ ಕಾಲ ಸರಳ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಲು ಅವಕಾಶ ನೀಡಿ ಪಾಲಿಕೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಕೊರೋನಾ ಸೋಂಕು ಹರಡುವಿಕೆ ತಡೆಗೆ ಗಣೇಶ ಚತುರ್ಥಿ ಹಬ್ಬವನ್ನು ತಮ್ಮ ಮನೆಗಳಲ್ಲಿ ಅಥವಾ ಸರ್ಕಾರಿ, ಖಾಸಗಿ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಸರಳವಾಗಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸಲು ಅವಕಾಶ ನೀಡಲಾಗಿದೆ. ಗಣೇಶ ಉತ್ಸವವನ್ನು ಸರಳವಾಗಿ ಆಚರಿಸುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪಾಲಿಕೆಯ ವಲಯ ಜಂಟಿ ಆಯುಕ್ತರು ಸೂಕ್ತ ಕ್ರಮಕೈಗೊಳ್ಳಲಬೇಕೆಂದು ಸೂಚಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು 4 ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ 2 ಅಡಿ ಮೀರದಂತೆ ಪ್ರತಿಷ್ಠಾಪಿಸಬೇಕು. ಪಾಲಿಕೆ 198 ವಾರ್ಡ್ ಗಳಲ್ಲಿ ವಾರ್ಡಿಗೆ ಒಂದರಂತೆ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. ಸ್ಥಳೀಯ ಪೊಲೀಸ್ ಇನ್ಸ್ ಪೆಕ್ಟರ್, ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರನ್ನು ಒಳಗೊಂಡ ಸಮಿತಿಯು ಸ್ಥಳ ನಿಗದಿಪಡಿಸಬೇಕು. ನಂತರ ವಿಭಾಗದ ಕಾರ್ಯಪಾಲಕ ಅಭಿಯಂತರರಿಂದ ಅನುಮತಿ ಪಡೆಯಬೇಕು ಎಂದು ತಿಳಿಸಿದರು.