ಕುಸಿದ ಮದ್ಯ ಮಾರಾಟ: ರಾಜ್ಯದ ಬೊಕ್ಕಸಕ್ಕೆ ಆದಾಯ ಕುಸಿತ

ಬೆಂಗಳೂರು: ಕೊರೋನಾ ಸೋಂಕಿನ ಆರ್ಭಟದಿಂದ ಈಗಾಗಲೇ ಆರ್ಥಿಕವಾಗಿ ಸಾಕಷ್ಟು ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಕ್ಕೆ ಪ್ರಮುಖ ಆದಾಯ ಮೂಲಗಳಲ್ಲಿ ಒಂದಾದ ಮದ್ಯ ಮಾರಾಟ ಶೇ.33.22ರಷ್ಟುಕುಸಿಯುವ ಮೂಲಕ ಮತ್ತೊಂದು ಆಘಾತ ಉಂಟಾಗಿದೆ.

2019-20ನೇ ಸಾಲಿನ ಬಜೆಟ್‌ನಲ್ಲಿ ಮದ್ಯಮಾರಾಟದಿಂದ 20,950 ಕೋಟಿ ರು. ಆದಾಯ ನಿರೀಕ್ಷಿಸಿದ್ದ ಸರ್ಕಾರ, ಜೂನ್‌ ವೇಳೆಗೆ 5,760.14 ಕೋಟಿ ರು. ಆದಾಯ ಗಳಿಸಿತ್ತು. ಅಂತೆಯೇ 2020-21ರ ಬಜೆಟ್‌ನಲ್ಲಿ 22,700 ಕೋಟಿ ರು. ಆದಾಯ ನಿರೀಕ್ಷೆ ಮಾಡಿದ್ದು, ಜೂನ್‌ ವೇಳೆಗೆ 3,848.76 ಕೋಟಿ ರು. ಆದಾಯ ಗಳಿಸಿದೆ. ಆದರೆ, ಕಳೆದ ಸಾಲಿನ ಈ ಅವಧಿಗೆ ಹೋಲಿಕೆ ಮಾಡಿದರೆ 1913.38 ಕೋಟಿ ರು. ಅಂದರೆ, ಶೇ.33.22ರಷ್ಟುಆದಾಯ ಕುಸಿತವಾಗಿದೆ. ಬಜೆಟ್‌ನ ಒಟ್ಟು ನಿರೀಕ್ಷಿತ ಆದಾಯಕ್ಕೆ ಹೋಲಿಕೆ ಮಾಡಿದರೆ ಶೇ.16.95ರಷ್ಟುಆದಾಯ ಕುಸಿದೆ.

ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆ ಮದ್ಯ ಸೇವನೆ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು, ಮದ್ಯಮಾರಾಟ ಕುಸಿತವಾಗಿ ಅಬಕಾರಿ ಇಲಾಖೆಗೆ ಭಾರೀ ನಿರಾಸೆ ಮೂಡಿಸಿದೆ. 

ಸೋಂಕಿನ ಭೀತಿಯಲ್ಲಿ ಜನ ಮನೆಗಳಿಂದ ಆಚೆ ಬರಲು ಭಯಪಡುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಮದ್ಯಪ್ರಿಯರು ಮದ್ಯಪಾನದಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ ಮದ್ಯ ಮಾರಾಟದಲ್ಲಿ ಭಾರೀ ಪ್ರಮಾಣದ ಕುಸಿತವಾಗಿದ್ದು, ಸರ್ಕಾರದ ಆದಾಯಕ್ಕೆ ಹೊಡೆತ ಬಿದ್ದಿದೆ.

2019-20ನೇ ಸಾಲಿನಲ್ಲಿ ಜೂನ್‌ ಅಂತ್ಯದ ವರೆಗೆ 152.38 ಲಕ್ಷ ಪೆಟ್ಟಿಗೆ ಮದ್ಯ ಮಾರಾಟವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಜೂನ್‌ ಅಂತ್ಯದ ವರೆಗೆ 100.76 ಲಕ್ಷ ಪೆಟ್ಟಿಗೆ ಮದ್ಯ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 51.62 ಲಕ್ಷ ಪೆಟ್ಟಿಗೆ ಮದ್ಯ ಮಾರಾಟ ಕಡಿಮೆಯಾಗಿದೆ. ಈ ಮೂಲಕ ಶೇ.33.88ರಷ್ಟುಮದ್ಯ ಮಾರಾಟ ಕುಸಿತವಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಮದ್ಯ ಮಾರಾಟದಿಂದ ಸರ್ಕಾರಕ್ಕೆ  2,500 ಕೋಟಿ ರೂ.ಗಳ ಹೆಚ್ಚುವರಿ ಆದಾಯವನ್ನು ಗಳಿಸಲು ಸಹಾಯವಾಗಿತ್ತು. ಈ ವರ್ಷದ ಮೊದಲ ತ್ರೈಮಾಸಿಕ ಆದಾಯ ಸಂಗ್ರಹವು ವಾಣಿಜ್ಯ ತೆರಿಗೆಗಳು, ನೋಂದಣಿಯಂತಹ ಇತರ ಇಲಾಖೆಗಳಿಗಿಂತ ಉತ್ತಮ ಆದಾಯ ತಂದಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಜೊತೆಗೆ ರಾಜ್ಯದ ಬೊಕ್ಕಸಕ್ಕೆ ಮಹತ್ತರವಾದ ಆದಾಯ ಕೂಡ ಅಬಕಾರಿ ಇಲಾಖೆ ನೀಡಿದೆ ಎಂದು ಹೇಳಿದ್ದಾರೆ,

Leave a Reply

Your email address will not be published. Required fields are marked *

error: Content is protected !!