ಲಕ್ಷ್ಮೀನಗರದ ಯುವಕನ ಹತ್ಯೆಯ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ?
ಮಲ್ಪೆ: (ಉಡುಪಿ ಟೈಮ್ಸ್ ವರದಿ) ಲಕ್ಷ್ಮೀನಗರದ ಯೋಗೀಶ್ ಸುವರ್ಣ(29)ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದು ತೀವೃ ವಿಚಾರಣೆಗೆ ಒಳಪಡಿಸಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೋಮವಾರ ರಾತ್ರಿ ಸುಮಾರು 11.30ಕ್ಕೆ ಲಕ್ಷ್ಮೀನಗರದ ಯೋಗೀಶ್ ಸುವರ್ಣನ ಮನೆ ಕಡೆ ಹೋಗುತ್ತಿದ್ದವನನ್ನು ಐವರು ಕಾರಿನಲ್ಲಿ ಹಿಂಬಾಲಿಸಿಕೊಂಡು ಹತ್ಯೆಗೈದಿದ್ದಾರೆ.
ಆರೋಪಿಗಳಾದ ಕಲ್ಯಾಣಪುರದ ರೋಹಿತ್ ಪಿಂಟೋ, ಸುಜಿತ್ ಪಿಂಟೋ, ಕೊಡಂಕೂರಿನ ಪ್ರದೀಪ್ ಯಾನೆ ಅಣ್ಣು, ಅಂಬಾಗಿಲು ಪುತ್ತೂರಿನ ವಿನಯ ಹಾಗೂ ಬೈಲಕೆರೆಯ ಅನುಪ್ ಯೋಗೀಶನನ್ನು ಮನೆಯ ಬಳಿ ಮಾರಕಾಸ್ತ್ರದಿಂದ ಹೊಟ್ಟೆ ಮತ್ತು ಬೆನ್ನಿಗೆ ತಿವಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಇದಕ್ಕೂ ಮೊದಲು ಆರೋಪಿಗಳು ಸಂತೆಕಟ್ಟೆಯ ಬಾರಿನಲ್ಲಿ ಯೋಗೀಶ್ ನೊಂದಿಗೆ ಯಾವುದೊ ವಿಚಾರದಲ್ಲಿ ಗಲಾಟೆ ನಡೆಸಿದ್ದರು, ಇದೇ ವಿಚಾರವಾಗಿ ಯೋಗೀಶ್ ತನ್ನ ಸ್ನೇಹಿತರಿಗೆ ಗಲಾಟೆಯ ಮಾಹಿತಿ ನೀಡಿದ್ದ ಎನ್ನಲಾಗಿದೆ. ನಂತರ ಮನೆಗೆ ಹೊರಟ ಯೋಗೀಶನನ್ನು ಹಿಂಬಾಲಿಸಿಕೊಂಡು ಬಂದ ತಂಡ ಆತ ಮನೆ ತಲುಪುತಿದ್ದಂತೆ ಫೋನ್ ಮಾಡಿ ಕರೆಸಿ ಹತ್ಯೆ ಮಾಡಿದ್ದಾರೆ.
ವರ್ವಾಡಿ ಪ್ರವೀಣ್ ಶೆಟ್ಟಿ ಮತ್ತು ಅಂಬಾಗಿಲು ಗುರುಪ್ರಸಾದ್ ಭಟ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸಹೋದರರಾದ ಕಲ್ಯಾಣಪುರದ ರೋಹಿತ್ ಪಿಂಟೋ, ಸುಜಿತ್ ಪಿಂಟೋ ಅವರು ನಾಲ್ಕು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದರು.