ಟೀಂ ಇಂಡಿಯಾ ಮುಂದಿನ ಕೋಚ್ ವಿಕ್ರಮ್ ರಾಥೋಡ್?
ನವದೆಹಲಿ: ಟೀಂ ಇಂಡಿಯಾ ಮುಖ್ಯ ತರಬೇತುದಾರ ರವಿಶಾಸ್ತ್ರಿ ಅವಧಿ ಟಿ 20 ವಿಶ್ವಕಪ್ ನಂತರ ಮುಗಿಯಲಿರುವ ಕಾರಣ ಅವರ ಸ್ಥಾನಕ್ಕೆ ಯಾರು ಎಂಬ ಬಗ್ಗೆ ಕಳೆದ ಕೆಲವು ದಿನಗಳಿಂದ ಆಸಕ್ತಿಕರ ಚರ್ಚೆಗಳು ಮುಂದುವರಿದಿವೆ. ಈ ವಿಷಯವಾಗಿ ಹೊಸದಾಗಿ ಒಂದು ಸ್ಪಷ್ಟತೆಗೆ ಬರಲಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
ಪ್ರಸ್ತುತ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ವಿಕ್ರಮ್ ರಾಥೋಡ್ ಮುಂದಿನ ಚೀಫ್ ಕೋಚ್ ಆಗಿ ಹೊಣೆ ವಹಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಬಿಸಿಸಿಐ ಹಿರಿಯರು ಕೂಡ ರಾಥೋಡ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಕೆಲ ಸಮಯದಿಂದ ಟೀಂ ಇಂಡಿಯಾ ಕೋಚ್ ಸ್ಥಾನದ ಪೈಪೋಟಿಯಲ್ಲಿ ರಾಹುಲ್ ದ್ರಾವಿಡ್ ಮುಂದಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತಾದರೂ, ಆವರು ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್ ಎಸಿಎ)ಗೆ ಸೀಮಿತವಾಗಲು ನಿರ್ಣಯಿಸಿಕೊಂಡಿರುವ ಕಾರಣ ರಾಥೋಡ್ ಗೆ ಲೈನ್ ಕ್ಲಿಯರ್ ಆಗಿದೆ ಎಂದು ಕ್ರಿಕೆಟ್ ಮಂಡಳಿ ಸಮೀಪವರ್ತಿಗಳು ಹೇಳುತ್ತಿವೆ.
ರವಿಶಾಸ್ತ್ರಿ ಜೊತೆಗೆ ನಾಯಕ ವಿರಾಟ್ ಕೋಹ್ಲಿ, ಹಿರಿಯ ಆಟಗಾರ ರೋಹಿತ್ ಶರ್ಮ ಜೊತೆಗೂ ರಾಥೋಡ್ ಉತ್ತಮ ಸಂಬಂಧ ಹೊಂದಿದ್ದು, ಇದು ಪ್ಲಸ್ ಪಾಯಿಂಟ್ ಆಗಿ ಮಾರ್ಪಟ್ಟಿದೆ. ಕೋಚ್ ಸ್ಥಾನದ ಪೈಪೋಟಿಯಲ್ಲಿ ರಾಥೋಡ್ ಸೇರಿದಂತೆ ಟೀಮಿಂಡಿಯಾ ಮಾಜಿ ಡಾಶಿಂಗ್ ಒಪೆನರ್ ವೀರೇಂದ್ರ ಸೆಹ್ವಾಗ್ ಹೆಸರು ಕೂಡ ಕೇಳಿಬಂದಿದೆ. ಬಿಸಿಸಿಐನಿಂದ ಅಧಿಕೃತ ಪ್ರಕಟಣೆ ಹೊರಬೀಳುವವರೆಗೆ ಟೀಂ ಇಂಡಿಯಾ ಹೆಡ್ ಕೋಚ್ ಸ್ಥಾನದ ಬಗ್ಗೆ ಸಸ್ಪೆನ್ಸ್ ಮುಂದುವರಿಯಲಿದೆ.