ಕಾಬೂಲ್: ತಾಲಿಬಾನಿಗಳು ಅಪಹರಣ ಮಾಡಿದ್ದ 150 ಭಾರತೀಯರ ಬಿಡುಗಡೆ
ಕಾಬೂಲ್: ಹಮೀದ್ ಕರ್ಜೈ ವಿಮಾನ ನಿಲ್ದಾಣದ ಸಮಿಪದ ಪ್ರದೇಶದಿಂದ ತಾಲಿಬಾನಿಗಳು ಅಪಹರಣ ಮಾಡಿದ್ದ ಭಾರತೀಯರನ್ನು ಇದೀಗ ಬಿಡುಗಡೆ ಮಾಡಲಾಗಿದ್ದು, ಮತ್ತೆ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇಂದು ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಸುಮಾರು 150 ಮಂದಿ ಭಾರತೀಯರನ್ನು ಅಪಹರಿಸಲಾಗಿತ್ತು ಎಂದು ಸ್ಥಳೀಯ ಮಾಧ್ಯಮ ಎಟಿಲಾಟ್ರೋಜ್ ವರದಿ ಮಾಡಿತ್ತು.
ಅಪಹರಣಕ್ಕೊಳಗಾಗಿರುವ ಭಾರತೀಯರು ಸದ್ಯ ಸುರಕ್ಷಿತವಾಗಿದ್ದಾರೆ. ಅವರನ್ನು ಅಪಹರಿಸಿದ ಗುಂಪು ಅವರ ಬಳಿ ಇದ್ದ ಪಾಸ್ ಪೋರ್ಟ್ ಪಡೆದು ತನಿಖೆ ನಡೆಸಿದೆ ಎಂದು ಎಟೊಲಾಟ್ರೋಜ್ ಟ್ವೀಟ್ ಮಾಡಿತ್ತು. ಇದೀಗ, ಅವರು ಕಾಬೂಲ್ ಸಮೀಪದ ಗರಾಜ್ನಲ್ಲಿದ್ದಾರೆ ಎಂದು ತಿಳಿಸಿದೆ.
ಅಪಹರಣಕ್ಕೊಳಗಾಗದವರಲ್ಲಿ ಅಫ್ಗಾನಿಸ್ತಾನ ಜನರು, ಅಫ್ಗನ್ ಸಿಖ್ಖರು ಮತ್ತು ಬಹುತೇಕರು ಭಾರತೀಯರಿದ್ದರು ಎಂದು ತಾಲಿಬಾನಿಗಳಿಂದ ತಪ್ಪಿಸಿಕೊಂಡ ವ್ಯಕ್ತಿ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
ರಾತ್ರಿ 1 ಗಂಟೆ ಸುಮಾರಿಗೆ ನಾವು ಮಿನಿ ವ್ಯಾನಿನಲ್ಲಿ ವಿಮಾನ ನಿಲ್ದಾಣಕ್ಕೆ ಹೊರಟಿದ್ದೆವು. ಅಧಿಕಾರಿಗಳು ಒಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಅಷ್ಟರೊಳಗೆ ಅಲ್ಲಿಗೆ ಬಂದ ತಾಲಿಬಾನಿಗಳನ್ನು ಎಲ್ಲರ ಮೇಲೆ ದೈಹಿಕ ಹಲ್ಲೆ ನಡೆಸಿ ಕರೆದೊಯ್ದರು. ಕರೆದೊಯ್ಯುವಾಗ ಮತ್ತೊಂದು ಗೇಟ್ ಮೂಲಕ ವಿಮಾನ ನಿಲ್ದಾಣಕ್ಕೆ ಸೇರಿಸುವುದಾಗಿ ತಾಲಿಬಾನಿಗಳು ಹೇಳಿದ್ದರು. ಈಗ ಅಪಹೃತರು ಎಲ್ಲಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಪತ್ನಿ ಜೊತೆ ತಾಲಿಬಾನಿಗಳಿಂದ ತಪ್ಪಿಸಿಕೊಂಡಿದ್ದ ವ್ಯಕ್ತಿ ಭಾರತೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.