ನಿಪ್ಪಾಣಿಯಲ್ಲಿ ಸಿಲುಕಿದ ಗರ್ಭಿಣಿ, ಮಕ್ಕಳು ಉಡುಪಿಗೆ: ಸೌಹಾರ್ದತೆ ಮೆರೆದ ಬಸ್ ಮಾಲಕ
ಉಡುಪಿ: ನಿಪ್ಪಾಣಿಯಲ್ಲಿ ಸಿಲುಕಿದ ಸುಮಾರು 31 ಕನ್ನಡಿಗರು ಪ್ರಯಾಣಿಕರು ಕೊನೆಗೂ ತಮ್ಮ ಸ್ವಂತ ಊರಿಗೆ ಬರುವಂತಯಿತು. ಮೇ 18 ರಂದು ಮುಂಬೈಯಿಂದ ಬಸ್ಸಿನಲ್ಲಿ ಹೊರಟ ಪ್ರಯಾಣಿಕರು ಕೇವಲ ಮುಂಬಯಿ ಪಾಸನ್ನು ಮಾತ್ರ ಪಡೆದಿದ್ದರು. ಪ್ರಯಾಣಿಕರಿಂದ 4500 ರೂ. ಪಡೆದು ಬಸ್ಸಿನ ಏಜೆಂಟ್‌ನವರು, ಇವರಿಗೆ ಅಲ್ಲಿನ ಸೇವಾ ಸಿಂಧು ಪಾಸ್ ಮಾಡಿಕೊಟ್ಟಿದ್ದರು.
ಆದರೆ ಕರ್ನಾಟಕಕ್ಕೆ ಬರುವ ಪಾಸ್ ನೀಡಿರಲಿಲ್ಲ, ಅದು ನಿಮ್ಮ ಮೊಬೈಲ್‌ಗಳಿಗೆ ಬಂದು ತಲುಪುವುದು ಎಂದು ಭರವಸೆ ಕೊಟ್ಟಿದ್ದರು. ಆದರೆ ಕರ್ನಾಟಕದ ಗಡಿಯನ್ನು ತಲುಪಿದರು ಕೂಡ ಈ ಪಾಸ್ ಬರದೇ ಇದ್ದಾಗ ಪ್ರಯಾಣಿಕರು ಕಂಗಾಲಾದರು.
ಆದರೆ ಅದಾಗಲೇ ಮುಂಬಯಿ ಕರೋನಾ ಸುಂಟರಗಾಳಿಗೆ ಕರ್ನಾಟಕ ನಲುಗಿ ಹೋಗಿತ್ತು. ಹಾಗಾಗಿ ಕರ್ನಾಟಕದ ಒಳಗೆ ಮುಂಬಯಿಗರ ಪ್ರವೇಶ ಅಸಾಧ್ಯವಾಗಿತ್ತು .ಈ ಸಮಯದಲ್ಲಿ ಮುಂಬಯಿಯಿಂದ ತಮ್ಮ ಮನೆ, ಕೆಲಸಗಳನ್ನು ಶಾಶ್ವತವಾಗಿ ಬಿಟ್ಟು ಬಂದಿರುವ ಅನೇಕ ಪ್ರಯಾಣಿಕರು ಅತ್ತ ಮುಂಬಯಿಗೂ ಹೋಗಲಾರದೆ ಇತ್ತ ಉಡುಪಿಗೂ ಬರಲಾರದೆ ಅಡಕತ್ತರಿಯಲ್ಲಿ ಸಿಲುಕಿಕೊಂಡರು.
ಬಸ್ಸಿನಲ್ಲಿ ಮಹಿಳೆಯರು ವೃದ್ಧರು ಗರ್ಭಿಣಿಯರು ಮಕ್ಕಳು ಸೇರಿದಂತೆ ಸುಮಾರು 31 ಪ್ರಯಾಣಿಕರು ದಾರಿ ಕಾಣದೆ ರಸ್ತೆಯ ಮಧ್ಯದಲ್ಲಿ ಉಳಿದುಕೊಳ್ಳುವಂತಾಯಿತು. ಈ ಬಗ್ಗೆ ಮೊದಲು ವರದಿ ಮಾಡಿದ್ದ ” ಉಡುಪಿ ಟೈಮ್ಸ್ ” ತಕ್ಷಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಗಮನ ಸೆಳೆಯಿತು. ಮಾತ್ರವಲ್ಲದೆ ನಿಪ್ಪಾಣಿಯಲ್ಲಿರುವ ನೊಡೆಲ್ ಅಧಿಕಾರಿ ಶೇಷಪ್ಪ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಲಾಯಿತು.
ಕೂಡಲೇ ಸ್ಪಂದಿಸಿದ ಕೋಟಾ ಮುಖ್ಯಮಂತ್ರಿಗಳಲ್ಲಿ ಇದರ ಬಗ್ಗೆ ಮನವಿ ಮಾಡಿದರು. ಅಷ್ಟೇ ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಂಸದೆ ಶೋಭಾ ಕರದ್ಲಾಜೆ ಜೊತೆ ಮಾತನಾಡಿ ಕರ್ನಾಟಕದ ಗಡಿಯನ್ನು ಪ್ರವೇಶಿಸುವ೦ತೆ ಮಾಡಿದರು.
ಮಾನವೀಯತೆ ಮೆರೆದ ಉಡುಪಿ ರೇಷ್ಮಾ ಬಸ್ ಮಾಲಕ:
ನಿಪ್ಪಾಣಿಯಲ್ಲಿ ಸಿಲುಕಿದ ಕನ್ನಡಿಗರನ್ನು ಕರೆತರುವಲ್ಲಿ ರೇಷ್ಮಾ ಬಸ್ಸಿನ ಮಾಲೀಕರಾದ ಮಹಮ್ಮದ್ ಮತೀನ್ ತಮ್ಮ ಮಾನವೀಯತೆ ಮೆರೆದಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು 10,000 ರೂ. ಭರಿಸಿ ಇನ್ನೋವಾ ಕಾರಿನಲ್ಲಿ ಗರ್ಭಿಣಿ, ವೃದ್ದರನ್ನು , ಮಕ್ಕಳನ್ನು ಉಡುಪಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ತಮ್ಮ ಸಹಾಯಕ್ಕೆ ನಿಂತ “ಉಡುಪಿ ಟೈಮ್ಸ್” ಮಾಧ್ಯಮ , ಸುರೇಶ್ ಶೆಟ್ಟಿ ಯೆಯ್ಯಾಡಿ , ದಿನೇಶ್ ಕಾಪುರವರ ಸಹಾಯಕ್ಕೆ ಪ್ರಯಾಣಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.