ಸಂಪೂರ್ಣ ODF PLUS-1 ಘೋಷಣೆಯತ್ತ ಉಡುಪಿ ಜಿಲ್ಲೆ
ಉಡುಪಿ: ಜಿಲ್ಲೆಯು ಈಗಾಗಲೇ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣದಲ್ಲಿ ಬಯಲು ಶೌಚ ಮುಕ್ತ ಜಿಲ್ಲೆಯಾಗಿದ್ದು,ಸಂಪೂರ್ಣ ಜಿಲ್ಲೆಯನ್ನು ODF PLUS-1 ಎಂದು ಘೋಷಣೆ ಮಾಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆ ಯನ್ನು ಸಂಪೂರ್ಣ ODF PLUS-1 ಎಂದು ಘೋಷಣೆ ಮಾಡಲು, ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಶೌಚಾಲಯಗಳ ನಿರ್ಮಾಣ, ಬಳಕೆ ಹಾಗೂ ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ, ಅಗತ್ಯವಿರುವೆಡೆ ಸಮುದಾಯ ಶೌಚಾಲಯ ನಿರ್ಮಾಣ ಮತ್ತು ಬಳಕೆ ಈ ಎಲ್ಲಾ ಅಂಶಗಳು ಅನುಷ್ಠಾನವಾಗಿರುವುದನ್ನು ಪರಿಶೀಲಿಸಬೇಕಾಗಿರುತ್ತದೆ.
ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ ಒಟ್ಟು 1369 ವೈಯಕ್ತಿಕ ಗೃಹ ಶೌಚಾಲಯಗಳ ಗುರಿ ಹೊಂದಿದ್ದು,
ಈಗಾಗಲೇ 1369 ಶೌಚಾಲಯಗಳ ಕಾರ್ಯಾದೇಶ ನೀಡಲಾಗಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ಜಿಲ್ಲೆಯ 131 ಗ್ರಾಮ ಪಂಚಾಯತ್
ಗಳಲ್ಲಿ ಘನ ತ್ಯಾಜ್ಯವನ್ನು ಕುಟುಂಬದ ಹಂತದಲ್ಲಿಯೇ ಬೇರ್ಪಡಿಸಿ ಸ್ವಸಹಾಯ ಸಂಘಗಳ ಮೂಲಕ ಸಂಗ್ರಹಿಸಿ ವೈಜ್ಞಾನಿಕವಾಗಿ
ನಿರ್ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಣ ತ್ಯಾಜ್ಯ ಸಂಗ್ರಹಣೆ ಸಂಗ್ರಹಣೆ ಹಾಗೂ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಹಸಿ ತ್ಯಾಜ್ಯವನ್ನು ಮನೆ ಹಂತದಲ್ಲಿಯೇ ನಿರ್ವಹಣೆ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ.ಒಣ ತ್ಯಾಜ್ಯ ಸಂಗ್ರಹಣೆಗೆ ಮನೆ ಮನೆ ಗೆ ನೀಲಿ ಬಣ್ಣದ ಬ್ಯಾಗ್ ಗಳನ್ನು ನೀಡಲಾಗುತ್ತಿದ್ದು, ಈಗಾಗಲೇ ಜಿಲ್ಲೆಯ 92 ಗ್ರಾಮ ಪಂಚಾಯತ್ ಗಳಿಗೆ ಒಣ ತ್ಯಾಜ್ಯ ಸಂಗ್ರಹಣೆ ಮಾಡಲು ಸ್ವಚ್ಚ ವಾಹಿನಿ ವಾಹನವನ್ನು ವಿತರಿಸಲಾಗಿದೆ.
MRF-Material Recovery Facility (ಕೇಂದ್ರೀಕೃತ ಘನ ತ್ಯಾಜ್ಯ ಸಂಸ್ಕರಣ ಘಟಕ) : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ 2.50 ಕೋಟಿ ರೂ ಮೊತ್ತದಲ್ಲಿ, ರಾಜ್ಯದ ಗ್ರಾಮೀಣ ಪ್ರದೇಶದ ಮೊದಲ MRF ಘಟಕವು ಕಾರ್ಯಾರಂಭ ಮಾಡುವ ಹಂತದಲ್ಲಿದೆ. ಘನ ತ್ಯಾಜ್ಯ ಸಂಸ್ಕರಣಾ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ MRF ಘಟಕದ ವ್ಯಾಪ್ತಿಗೆ ಕಾರ್ಕಳದ (27), ಉಡುಪಿ (3), ಹೆಬ್ರಿ(1), ಕಾಪು(10) ತಾಲೂಕುಗಳ ಒಟ್ಟು 41 ಗ್ರಾಮ ಪಂಚಾಯತ್ ಗಳು ಒಳಪಡುತ್ತವೆ. ಸುಮಾರು 73 ಸಾವಿರ ಮನೆ ಹಾಗೂ 7000 ವಾಣಿಜ್ಯ ಘಟಕಗಳ ಘನ ತ್ಯಾಜ್ಯ ಸಂಸ್ಕರಣೆಯನ್ನು ಇಲ್ಲಿ ಮಾಡಲು ಯೋಜನೆ ಸಿದ್ಧಗೊಂಡಿದೆ. ಘಟಕವು ಪ್ರತಿ ನಿತ್ಯ 10 ಟನ್ ತ್ಯಾಜ್ಯ ವಿಲೇವಾರಿಯ ಸಾಮರ್ಥ್ಯವನ್ನು ಹೊಂದಿದೆ.
FSM PLANT: ರಾಜ್ಯದಲ್ಲಿಯೇ ಪ್ರಾಯೋಗಿಕವಾಗಿ ಉಡುಪಿ ಜಿಲ್ಲೆಯಲ್ಲಿ 80 ಬಡಗಬೆಟ್ಟು, ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಲ ತ್ಯಾಜ್ಯ ನಿರ್ವಹಣೆ ಘಟಕ ಆರಂಭವಾಗುತ್ತಿದೆ. ಇದರಿಂದಾಗಿ ಸುತ್ತಮುತ್ತಲಿನ ಗ್ರಾಮ ಪಂಚಾಯತ್ ಗಳ ಕುಟುಂಬಗಳಿಗೆ ಅನುಕೂಲವಾಗಲಿದೆ. ಕೊಲ್ಲೂರು ಹಾಗೂ ಮಂದಾರ್ತಿ ದೇವಸ್ಥಾನ ಗಳಲ್ಲಿ ಹಸಿ ತ್ಯಾಜ್ಯ ನಿರ್ವಹಣೆಗೆ ಗೋಭರ್ ಧನ್ ಯೋಜನೆಯಡಿ ಬಯೋ ಗ್ಯಾಸ್ ಘಟಕ ಮಂಜೂರಾಗಿರುತ್ತದೆ. ವಂಡ್ಸೆ ಹಾಗೂ ನಿಟ್ಟೆ ಗ್ರಾಮ ಪಂಚಾಯತ್ ಗಳಿಗೂ ಈ ಘಟಕ ಮಂಜೂರಾಗಿದ್ದು, ಅನುಷ್ಠಾನ ಪ್ರಗತಿಯಲ್ಲಿದೆ.
ಜಿಲ್ಲೆಯಲ್ಲಿ ಈಗಾಗಲೇ 132 ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಗಳು ODF PLUS-1 ಎಂದು ಘೋಷಣೆಯಾಗಿದ್ದು, ಎಲ್ಲಾ 155 ಗ್ರಾಮ ಪಂಚಾಯತ್ ಗಳನ್ನು ಆಕ್ಟೋಬರ್ 2 ರ ಗಾಂಧೀ ಜಯಂತಿ ಯಂದು ODF PLUS-1 ಎಂದು ಘೋಷಣೆ ಮಾಡುವ ಗುರಿ ಹೊಂದಲಾಗಿದ್ದು, ಈ ಬಗ್ಗೆ ಈಗಾಗಲೇ ಸಂಬOದಪಟ್ಟ ಎಲ್ಲಾ ಗ್ರಾಮ ಪಂಚಾಯತ್ ಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದ್ದು, ಅವಧಿಯೊಳಗೆ ಗುರಿ ಸಾಧಿಸುವಂತೆ ಸೂಚನೆ ನೀಡಲಾಗಿದೆ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್.