ಸೌದಿ ದೊರೆಯ ಅವಹೇಳನ ಆರೋಪ ಮುಕ್ತವಾಗಿ ತಾಯ್ನಾಡಿಗೆ ಬಂದಿಳಿದ ಹರೀಶ್ ಬಂಗೇರ

ಉಡುಪಿ: ಫೇಸ್‌ಬುಕ್‌ನಲ್ಲಿ ಮೆಕ್ಕಾ ಹಾಗೂ ಸೌದಿ ದೊರೆಯ ಬಗ್ಗೆ ಅವಹೇಳನಕಾರಿಯಾಗಿ ಬರಹ ಪ್ರಕಟಿಸಿದ ಆರೋಪದಡಿಯಲ್ಲಿ ಸೌದಿ ಅರೇಬಿಯಾದಲ್ಲಿ ಬಂಧಿಯಾಗಿದ್ದ ಕೋಟೇಶ್ವರ ಸಮೀಪದ ಬೀಜಾಡಿ ನಿವಾಸಿ ಹರೀಶ್ ಬಂಗೇರ ಒಂದು ವರ್ಷ ಏಳು ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿ ಬುಧವಾರ ಮುಂಜಾನೆ ಬೆಂಗಳೂರಿಗೆ ಆಗಮಿಸಿದ್ದಾರೆ.

ಆ. 17ರಂದು ಸೌದಿ ಅರೇಬಿಯಾದ ದಮಾಮ್ ವಿಮಾನ ನಿಲ್ದಾಣದಿಂದ ದೋಹಾ ಹೊರಟು ದೋಹಾ ಮೂಲಕ ಆ. 18 ರಂದು 2.15ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ್ದು 6.30ರ ಸುಮಾರಿಗೆ ವಿಮಾನ ನಿಲ್ದಾಣದಿಂದ ಹೊರಗೆ ಬಂದ ಹರೀಶ್ ಅವರನ್ನು ಪತ್ನಿ‌, ಮಗು ಆತ್ಮೀಯವಾಗಿ ಬರಮಾಡಿಕೊಂಡರು. ಅಲ್ಲದೆ ಹರೀಶ್ ಬಂಗೇರ ಬಿಡುಗಡೆಗಾಗಿ ನಿರಂತರವಾಗಿ ಶ್ರಮಿಸಿದ ಲೋಕೇಶ್ ಅಂಕದಕಟ್ಟೆ ಹಾಗೂ ತಂಡ ಜೊತೆಗಿದ್ದು ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದಾರೆ. ಇಂದು ಮಧ್ಯಾಹ್ನ ಬೆಂಗಳೂರಿನಿಂದ ಹೊರಟು ಹುಟ್ಟೂರಿಗೆ ಆಗಮಿಸುವ ಬಗ್ಗೆ ಮಾಹಿತಿಯಿದೆ.

ಕಿಡಿಗೇಡಿಗಳು ಹರೀಶ್‌ ಬಂಗೇರ ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಸೌದಿಯ ದೊರೆ ಮತ್ತು ಇಸ್ಲಾಂ ಧರ್ಮದ ಶ್ರದ್ಧಾಕೇಂದ್ರ ಮೆಕ್ಕಾದ ಬಗ್ಗೆ ಫೇಸ್‌ಬುಕ್‌ ನಲ್ಲಿ ಅವಹೇಳನಕಾರಿ ಪೋಸ್ವ್‌ ಹಾಕಿದ್ದರು. ಈ ಕಾರಣಕ್ಕೆ ಹರೀಶ್‌ ಬಂಗೇರರನ್ನು 2019ರ ಡಿಸೆಂಬರ್‌ ನಲ್ಲಿ ಸೌದಿ ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ಹರೀಶ್‌ ಅವರ ಪತ್ನಿ ಸುಮನಾ ಉಡುಪಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ಮೂಡುಬಿದಿರೆಯ ಅಬ್ದುಲ್‌ ಹುಯೇಸ್‌ ಮತ್ತು ಅಬ್ದುಲ್‌ ತುವೇಸ್‌ ಎಂಬವರನ್ನು ಬಂಧಿಸಿದ್ದರು. ಅವರು ಹರೀಶ್‌ ಅವರ ಹೆಸರಿನಲ್ಲಿ ನಕಲಿ ಫೇಸ್‌ ಬುಕ್‌ ಖಾತೆ ತೆರೆದು, ಅದರಲ್ಲಿ ಸೌದಿ ದೊರೆ ಮತ್ತು ಮೆಕ್ಕಾದ ವಿರುದ್ಧ ಪೋಸ್ವ್‌ ಹಾಕಿ, ಅದರ ಸ್ಕ್ರೀನ್‌ ಶಾಟ್‌ ತೆಗೆದು ಅದನ್ನು ವೈರಲ್‌ ಮಾಡಿದ್ದರು ಮತ್ತು ನಂತರ ಈ ನಕಲಿ ಫೇಸ್‌ ಬುಕ್‌ ಖಾತೆಯನ್ನು ಡಿಲೀಟ್‌ ಮಾಡಿದ್ದರು.

ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಸೈಬರ್ ಅಪರಾಧ ವಿಭಾಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಬಿದರೆಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆಯಲ್ಲಿ ಹರೀಶ್ ಬಂಗೇರ ಅವರ ನಕಲಿ ಖಾತೆ ತೆರೆದಿರುವ ಹಾಗೂ ಈ ಖಾತೆಗೂ ಬಂಗೇರ ಅವರಿಗೂ ಸಂಬಂಧ ಇಲ್ಲದೆ ಇರುವ ಅಂಶಗಳು ಬೆಳಕಿಗೆ ಬಂದಿತ್ತು. ತನಿಖೆಯಲ್ಲಿ ಕಂಡು ಬಂದಿದ್ದ ಅಂಶಗಳನ್ನು ರಾಯಭಾರಿ ಕಚೇರಿ ಮೂಲಕ ಸೌದಿ ಅರೇಬಿಯಾ ಸರ್ಕಾರಕ್ಕೂ ತಲುಪಿಸಲಾಗಿತ್ತು.

ಹೋರಾಟದಲ್ಲಿ ಲೋಕೇಶ್ ಅಂಕದಕಟ್ಟೆ ಹಾಗೂ ವಿವಿಧ ಸಮಾನಮನಸ್ಕರು, ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತ ಡಾ. ರವೀಂದ್ರ‌ನಾಥ್ ಶ್ಯಾನುಭಾಗ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ‌ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕ ಹಾಲಾಡಿ‌ ಶ್ರೀನಿವಾಸ್‌ ಶೆಟ್ಟಿ‌, ಎಡಿಜಿಪಿ ಕಮಲಪಂತ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹಿತ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೂಡ ಹರೀಶ್ ಬಂಗೇರ ಬಿಡುಗಡೆ ಶ್ರಮವಹಿಸಿದೆ.

Leave a Reply

Your email address will not be published. Required fields are marked *

error: Content is protected !!