ಕುಂದಾಪುರ: ಆಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ
ಕುಂದಾಪುರ: ನಾಪತ್ತೆಯಾಗಿದ್ದ ಆಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದ್ದು ಮಂಗಳವಾರ ಕುಂದಾಪುರ ತಾಲೂಕಿನ ವಕ್ವಾಡಿ-ಕಾಳಾವರ ರಸ್ತೆ ಸಮೀಪದ ಸರಕಾರಿ ಹಾಡಿಯಲ್ಲಿ ಶವ ಪತ್ತೆಯಾಗಿದೆ.
ವಕ್ವಾಡಿ ನವನಗರ ನಿವಾಸಿ ರವಿಚಂದ್ರ ಕುಲಾಲ್ (33) ಆತ್ಮಹತ್ಯೆಗೆ ಶರಣಾದ ಯುವಕ. ರವಿಚಂದ್ರ ಕುಲಾಲ್ ಸೋಮವಾರ ಮಧ್ಯಾಹ್ನ ತನ್ನ ಆಟೋ ರಿಕ್ಷಾವನ್ನು ವಕ್ವಾಡಿ ನವನಗರ ತಿರುವಿನಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದರು. ತನ್ನ ವಾಟ್ಸಾಪ್ ಸ್ಟೇಟಸ್’ ನಲ್ಲಿ ಬರಹಗಳನ್ನು ಬರೆದುಕೊಂಡಿದ್ದರಿಂದ ಅನುಮಾನಗೊಂಡ ಸ್ನೇಹಿತರು ಹಾಗೂ ಮನೆಯವರು ನಿರಂತರವಾಗಿ ಕರೆ ಮಾಡಿದರೂ ಕೂಡ ರವಿಚಂದ್ರ ಕರೆ ಸ್ವೀಕರಿಸಿರಲಿಲ್ಲ.
ಕೊನೆಗೆ ಸ್ನೇಹಿತರು, ಮನೆಯವರು ಹುಡುಕಾಟ ನಡೆಸಿದ್ದ ಹುಡುಕಾಡಿದ್ದರು ಪತ್ತೆಯಾಗಿರಲಿಲ್ಲ. ಮಂಗಳವಾರ ಬೆಳಿಗ್ಗೆ ವಕ್ವಾಡಿ-ಕಾಳಾವರ ರಸ್ತೆ ಹಾಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರವಿಚಂದ್ರ ಕುಲಾಲ್ ಮೃತದೇಹ ಪತ್ತೆಯಾಗಿದೆ. ಘಟನೆ ಸ್ಥಳಕ್ಕೆ ಕುಂದಾಪುರ ಪಿಎಸ್ಐ ಸದಾಶಿವ ಗವರೋಜಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.
ವಿವಾಹಿತರಾಗಿದ್ದ ರವಿಚಂದ್ರ ಕುಲಾಲ್ ಅವರಿಗೆ 8 ತಿಂಗಳ ಗಂಡು ಮಗುವಿದೆ. ತಂದೆ, ತಾಯಿ ಹಾಗೂ ಮೂವರು ಸೋದರರನ್ನು ಅಗಲಿದ್ದಾರೆ. ವಕ್ವಾಡಿ ಹೆಗ್ಗಾರಬೈಲಿನ ಯುವಶಕ್ತಿ ಮಿತ್ರ ಮಂಡಲದ ಉಪಾಧ್ಯಕ್ಷರಾಗಿದ್ದ ರವಿಚಂದ್ರ ಸಂಘಟನಾ ಚತುರ ಹಾಗೂ ಉತ್ತಮ ನಿರೂಪಕನಾಗಿದ್ದರು.