ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಯುವ ಯಕ್ಷಗಾನ ಕಲಾವಿದನ ಮೃತದೇಹ ಪತ್ತೆ
ಉತ್ತರ ಕನ್ನಡ: ಜಿಲ್ಲೆಯ ಕುಮಟಾದ ಯುವ ಯಕ್ಷಗಾನ ಕಲಾವಿದ ಕಂದವಳ್ಳಿ ಗೋಪಾಲ ಗೌಡ (29 ವರ್ಷ) ಆ.14ರಂದು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಸ0ದರ್ಭದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು.
ಇಂದು ಅವರ ಮೃತದೇಹ ಕುಮಟಾ ಹೆಡ್ ಬಂದರ್ ಬೀಚ್ ಬಳಿ ದೊರಕಿದ್ದು ಇವರ ನಿಧನದಿಂದ ಇಡೀ ಯಕ್ಷಗಾನ ಕ್ಷೇತ್ರ ತಲ್ಲಣ ಗೊಂಡಿದೆ. ಹಿರಿಯ ಯಕ್ಷಗಾನ ಕಲಾವಿದ ಲಕ್ಷ್ಮಣ ಕಾಂಚನರ ಪ್ರೇರಣೆಯಿಂದ ಯಕ್ಷಗಾನವನ್ನು ಕಲಿತು ಸಿಗಂದೂರು, ಮಡಾಮಕ್ಕಿ ಮೇಗರವಳ್ಳಿ, ಹಟ್ಟಿಯಂಗಡಿ ಪ್ರಕೃತ ಬೊಳ್ಳಂಬಳ್ಳಿ ಮೇಳದಲ್ಲಿ ಒಟ್ಟು 13 ವರ್ಷ ಕಲಾಸೇವೆಗೈದಿದ್ದರು.
ಅಭಿಮನ್ಯು, ಬಬ್ರುವಾಹನ ಮುಂತಾದ ವೇಷಗಳ ಜೊತೆಗೆ ಹೊಸ ಪ್ರಸಂಗದ ವಿಶಿಷ್ಟ ವೇಷಗಳನ್ನು ಕೂಡ ಸೊಗಸಾಗಿ ನಿರ್ವಹಿ ಸುತ್ತಿದ್ದರು. ತಂದೆ, ತಾಯಿ, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.