ರಾಜ್ಯದಲ್ಲೂ ಪ್ರೀಪೈಡ್ ವಿದ್ಯುತ್ ಮೀಟರ್ ಅಳವಡಿಕೆಗೆ ಚಿಂತನೆ: ಸಚಿವ ಸುನಿಲ್ ಕುಮಾರ್
ಕೋಟ: ಕೇಂದ್ರ ಸರ್ಕಾರದ ಪ್ರೀಪೈಡ್ ಮೀಟರನ್ನು ಅಳವಡಿಸುವ ಯೋಜನೆಯನ್ನು ರಾಜ್ಯದಲ್ಲೂ ಅಳವಡಿಸುವ ಬಗ್ಗೆ ಬೆಸ್ಕಾಂನಲ್ಲಿ ಈಗಾಗಲೇ ಚರ್ಚೆ ಮಾಡಲಾಗಿದೆ. ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಇದರ ಸಾಧಕ ಬಾಧಕಗಳನ್ನು ನೋಡಿ ಮುಂದಿನ ದಿನಗಳಲ್ಲಿ ಜಾರಿಗೆ ತರಲು ಯೋಚಿಸಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಕೋಟದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುನಿಲ್ ಕುಮಾರ್ ವಿದ್ಯುತ್ ನಿಗಮದಲ್ಲಿ ಖಾಲಿ ಇರುವ ಕೆಲವು ಹುದ್ದೆಗಳಿಗೆ ನೇಮಕಾತಿ ಆದೇಶವನ್ನು ನೀಡಿದ್ದರೂ,ಕೆಲವೊಂದು ಕಾರಣಗಳಿಂದ ಇದುವರೆಗೆ ನೇಮಕಾತಿ ಆಗಿಲ್ಲ. ಬೆಂಗಳೂರಿನಲ್ಲಿ ಬುಧವಾರ ನಡೆಯುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನೇಮಕಾತಿ ಮಾಡಲಾಗುವುದು. ಆದೇಶ ಬಂದಿರುವ ಅಭ್ಯರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಅವರು ತಿಳಿಸಿದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನದ ಬಗ್ಗೆ ಮಾತನಾಡಿ ಕೊರೊನಾದಿಂದ ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಈಗಿನ ಸ್ಥಿತಿಯಲ್ಲಿ ಪುನಶ್ಚೇತನದ ಮಾತು ಕಷ್ಟ. ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಈ ಬಗ್ಗೆ ಚಿಂತಿಸಲಾಗುವುದು ಎಂದರು.