ಸಿ.ಟಿ.ರವಿಯೇ ನಿಜವಾದ ದೇಶದ್ರೋಹಿ-ರಮಾನಾಥ ರೈ

ಮಂಗಳೂರು: ದೇಶದ ಒಳಿತಿಗಾಗಿ ಜೈಲಿಗೆ ಹೋದವರು ಮತ್ತು ಹುತಾತ್ಮರಾದವರ ಬಗ್ಗೆ ಹಗುರವಾಗಿ ಮಾತನಾಡುವ ಸಿ.ಟಿ. ರವಿಯಂತಹವರೇ ನಿಜವಾದ ದೇಶದ್ರೋಹಿಗಳು ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂದರೆ ಎಲ್ಲವೂ ತಾನೇ ಎಂದು ರವಿ ಭಾವಿಸಿದಂತಿದೆ. ಮೇಕೆದಾಟು ವಿಷಯದಲ್ಲಿ ಕರ್ನಾಟಕದ ಪರ ನಿಲ್ಲಬೇಕಿದ್ದ ರವಿ, ತಮಿಳುನಾಡು ಪರ ನಿಂತಿರುವುದು ಅಕ್ಷಮ್ಯ. ಇತಿಹಾಸ ಜ್ಞಾನವಿಲ್ಲದ, ಸಾಮಾಜಿಕ ಹಿನ್ನಲೆಯೂ ಇಲ್ಲದ ಮತ್ತು ದೇಶಕ್ಕೆ ಅಪಾರ ಕೊಡುಗೆ ನೀಡಿದವರ ಬಗ್ಗೆ ಅಸಂಬದ್ಧವಾಗಿ, ಹಗುರವಾಗಿ ಮಾತನಾಡುವ ಸಿಟಿ ರವಿ ಅಂಥವರಿಗೆ ಬಿಜೆಪಿ ಮಣೆ ಹಾಕುತ್ತಿರುವುದು ವಿಪರ್ಯಾಸ’ ಎಂದರು.

‘ದೇಶಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ ಮಹಾತ್ಮರ ಹೆಸರನ್ನು ಬದಲಾಯಿಸುವ ಮತ್ತು ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಬಿಜೆಪಿಗರು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ ಸ್ಮಾರಕಗಳ ಹೆಸರನ್ನೂ ಕೂಡ ಬದಲಾಯಿಸಿದರೂ ಅಚ್ಚರಿಯಿ‌ಲ್ಲ. ಸಿ.ಟಿ.ರವಿ, ಸಚಿವ ಕೆ.ಎಸ್. ಈಶ್ವರಪ್ಪ ಅವರಂತಹವರು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ, ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರ ಬಗ್ಗೆ ಸಿ.ಟಿ.ರವಿ ಬಗ್ಗೆ ಹಗುರವಾಗಿ ಮಾತನಾಡುತ್ತಲೇ ಗೋಡ್ಸೆಗೆ ದೇಶಪ್ರೇಮಿಯ ಹಣೆಪಟ್ಟಿ ಕಟ್ಟುತ್ತಿದ್ದಾರೆ. ಇದು ಖಂಡನೀಯ ಎಂದು ರಮಾನಾಥ ರೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಶಾಹುಲ್ ಹಮೀದ್, ಶಶಿಧರ ಹೆಗ್ಡೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!