ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರ್’ಟಿಪಿಸಿಆರ್ ಟೆಸ್ಟ್ -ಶೀಘ್ರವೇ ಯಾನ ಪುನರಾರಂಭ
ಮಂಗಳೂರು, ಆ.16: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಪಿಡ್ ಆರ್’ಟಿಪಿಸಿಆರ್ ಟೆಸ್ಟ್‌ಗೆ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆ ಇಂದಿನಿಂದ ಆರಂಭಗೊಳ್ಳಲಿದ್ದು, ಇದು ಭಾರತದಿಂದ ಯುಎಇ ಹಾಗೂ ಇತರ ದೇಶಗಳಿಗೆ ತೆರಳುವವರಿಗೆ ಅನುಕೂಲವಾಗಲಿದೆ.
ಕೊರೋನಾ ಹೆಚ್ಚಳದ ಕಾರಣ ಭಾರತ-ಯುಎಇ ವೈಮಾನಿಕ ಸಂಚಾರದ ಮೇಲೆ ಹೇರಿದ್ದ ನಿಷೇಧವನ್ನು ಆಗಸ್ಟ್ 5 ರಂದು ಯುಎಇ ಸರಕಾರ ಹಿಂಪಡೆದು ಕೆಲವೊಂದು ಷರತ್ತುಗಳೊಂದಿಗೆ ಪ್ರಯಾಣಿಸಲು ಅನುಮತಿ ನೀಡಿತ್ತು. ಆದರೆ, ಯುಎಇ ರೆಸಿಡೆನ್ಸ್ ವೀಸಾ ಹೊಂದಿರುವುದು, 2 ಡೋಸ್ ಕೊರೊನಾ ನಿರೋಧಕ ಲಸಿಕೆ ಪಡೆದಿರುವುದು, 48 ಗಂಟೆ ಮೊದಲ ಆರ್ ಟಿಪಿಸಿಆರ್ ಟೆಸ್ಟ್‌ನಲ್ಲಿ ನೆಗೆಟಿವ್ ವರದಿ ಹೊಂದಿರಬೇಕು ಎಂಬ ಷರತ್ತು ನೀಡಿತ್ತು. ಇದರೊಂದಿಗೆ ಪ್ರಯಾಣ ಹೊರಡುವ ಮುನ್ನ ವಿಮಾನ ನಿಲ್ದಾಣದಲ್ಲಿಯೂ ರಾಪಿಡ್ ಆರ್‌ಟಿಪಿಸಿಆರ್ ಟೆಸ್ಟ್ ನಡೆಸಿ ನೆಗೆಟಿವ್ ವರದಿ ಹೊಂದಿರಬೇಕು (ಅದು 4 ಗಂಟೆ ಅವಧಿಯೊಳಗಿನ ರಿಪೋರ್ಟ್ ಆಗಿರಬೇಕು) ಎಂಬ ಹೊಸ ಷರತ್ತನ್ನು ಸೇರ್ಪಡೆ ಮಾಡಿತ್ತು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ವ್ಯವಸ್ಥೆ ಇಲ್ಲದಿರುವ ಕಾರಣ ಇಲ್ಲಿ ಯುಎಇಗೆ ವಿಮಾನ ಯಾನ ಆರಂಭವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿಕರಾವಳಿಯ ಕರ್ನಾಟಕದ ಸಾವಿರಾರು ಮಂದಿ ಯುಎಇಗೆ ತೆರಳಲು ಬೆಂಗಳೂರು, ಮುಂಬಯಿ ವಿಮಾನ ನಿಲ್ದಾಣದ ಮೊರೆ ಹೋಗಬೇಕಾಗಿತ್ತು.
ಅನಿವಾಸಿ ಕನ್ನಡಿಗರ ಈ ಸಮಸ್ಯೆಗಳ ಕುರಿತು ಕನ್ನಡಿಗಾಸ್ ಫೆಡರೇಶನ್ ಸಂಚಾಲಕ ಹಿದಾಯತ್ ಅಡ್ಡೂರು ಅವರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರಿಗೆ ತಿಳಿಸಿದ್ದರು. ಇದೀಗ ಮಂಗಳೂರು ವಿಮಾನ ನಿಲ್ದಾಣ ದಲ್ಲಿ ಈ ವ್ಯವಸ್ಥೆ ಕಲ್ಪಿಸಿದ್ದರಿಂದ ಶೀಘ್ರವೇ ಮಂಗಳೂರಿನಿಂದ ಯುಎಇ ವಿಮಾನ ಯಾನ ಪುನರಾರಂಭಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.