ಪುತ್ತೂರು:ಸ್ವಾತಂತ್ರ್ಯ ರಥ ಸಂಚಾರದಲ್ಲಿ ಸಾವರ್ಕರ್ ಫೋಟೋ- ಅಡ್ಡಿಪಡಿಸಿದ ಮೂವರ ಬಂಧನ

ಪುತ್ತೂರು: 75ನೇ ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ಕಬಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಹೊರಟ ಸ್ವರಾಜ್ಯ ರಥದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜೊತೆಗೆ ವೀರ ಸಾವರ್ಕರ್ ಭಾವಚಿತ್ರ ಹಾಕಿರುವುದಕ್ಕೆ ಎಸ್’ಡಿಪಿಐ ಕಾರ್ಯಕರ್ತರು ವಿರೋಧಿಸಿ, ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆಯಿತು. 

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾದ ಈ ಸಂಭ್ರಮದಲ್ಲಿ ಕಬಕ ಗ್ರಾಮ ಪಂಚಾಯತ್ ವತಿಯಿಂದ ಸ್ವಾತಂತ್ರ್ಯ ರಥ ಎಂಬ ವಾಹನವನ್ನು ಸಿದ್ಧಪಡಿಸಲಾಗಿತ್ತು. ಈ ರಥದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬ್ಯಾನರ್ ಹಾಕಲಾಗಿದ್ದು, ಇದರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಲಾಲ ಲಜಪತರಾಯ್, ಚಂದ್ರಶೇಖರ್ ಆಜಾದ್, ಲಾಲ್ ಬಹುದ್ಧೂರ್ ಶಾಸ್ತ್ರಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಬಾಲಗಂಗಾಧರ ನಾಥ್ ತಿಲಕ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ವೀರ್ ಸಾವರ್ಕರ್ ಭಾವಚಿತ್ರವನ್ನು ಅಳವಡಿಸಲಾಗಿತ್ತು.

ಗ್ರಾಮ ಪಂಚಾಯತ್ ರಥಕ್ಕೆ ಕಬಕ ಗ್ರಾ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಲ್ಲೇಗ ಚಾಲನೆ ನೀಡುತ್ತಿದ್ದ ವೇಳೆ, ಸ್ಥಳಕ್ಕೆ ಆಗಮಿಸಿದ ಎಸ್‌ಡಿಪಿಐ ಕಾರ್ಯಕರ್ತರು ಗೂಂಡಾ ವರ್ತನೆ ತೋರಿದರು. ವೀರ್ ಸಾವರ್ಕರ್ ಫೋಟೋ ಇರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಎಸ್‌ಡಿಪಿಐ ಕಾರ್ಯಕರ್ತರು, ಬ್ಯಾನರ್ ಹರಿಯಲು ಮುಂದಾಗಿದ್ದರು. ಅಲ್ಲದೇ ವೀರ್ ಸಾವರ್ಕರ್ ಫೋಟೋ ಹಾಕಿದ ಗ್ರಾಮ ಪಂಚಾಯತ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಅಲ್ಲದೇ ಸ್ವಾತಂತ್ರ್ಯ ರಥವನ್ನು ಹಾನಿ ಮಾಡಲು ಮುಂದಾಗಿದ್ದಾರೆ.

ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಲ್ಲೇಗ ಮತ್ತು ಇತರ ಸದಸ್ಯರು ಎಸ್‌ಡಿಪಿಐ ಕಾರ್ಯಕರ್ತರು ಸ್ವಾತಂತ್ರ್ಯ ರಥವನ್ನು ಹಾನಿ ಮಾಡುವುದನ್ನು ತಡೆದಾಗ ಪರಸ್ಪರ ವಾಗ್ವಾದ, ನೂಕಾಟ, ತಳ್ಳಾಟ ನಡೆದಿತ್ತು. 

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ಯತ್ನಿಸಿದರೂ, ಕೇಳದ ಕಾರ್ಯಕರ್ತರು ಸಾವರ್ಕರ್ ಫೋಟೋ ಹರಿದು ಅಲ್ಲಿ ಟಿಪ್ಪು ಸುಲ್ತಾನ್ ಫೋಟೋ ಹಾಕುವಂತೆ ಪಟ್ಟು ಹಿಡಿದಿದ್ದರು. ಸಾವರ್ಕರ್ ಮತ್ತು ಗ್ರಾಮ ಪಂಚಾಯತ್‌ಗೆ ಧಿಕ್ಕಾರ ಕೂಗಿ ಹಲ್ಲೆ ನಡೆಸಲು ಮುಂದಾಗಿದ್ದಾರೆ.

ಪರಿಸ್ಥಿತಿ ಕೈ ಮೀರುವ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪುತ್ತೂರು ನಗರ ಠಾಣಾ ಇನ್ಸ್‌ಪೆಕ್ಟರ್ ಗೋಪಾಲ ನಾಯ್ಕ್ ನೇತೃತ್ವದ ಪೊಲೀಸ್ ತಂಡ, ಪ್ರತಿಭಟನಾಕಾರರನ್ನು ಚದುರಿಸಿದರು. ಬಳಿಕ ಘಟನೆ ಸಂಬಂಧ ಮೂವರನ್ನು ಬಂಧನಕ್ಕೊಳಪಡಿಸಿದತು. ನಂತರ ಪೊಲೀಸ್ ಭದ್ರತೆಯೊಂದಿಗೆ ಸ್ವಾತಂತ್ರ್ಯ ರಥ ಗ್ರಾಮದೊಳಗೆ ಸಂಚಾರ ನಡೆಸಿತು. 

ಘಟನೆ ಸಂಬಂಧ ಎಸ್’ಡಿಪಿಐ ನಾಯಕ ಅಥಾವುಲ್ಲಾ ಜೋಕಟ್ಟೆ ಅವರು ಮಾತನಾಡಿ, ಸ್ವಾತಂತ್ರ್ಯ ದಿನದ ಸಿದ್ಧತೆ ಸಭೆಯಲ್ಲಿ ಮೆರವಣಿಗೆ ಕುರಿತು ಯಾವುದೇ ಮಾಹಿತಿಗಳನ್ನು ನೀಡಿರಲಿಲ್ಲ ಎಂದು ಹೇಳಿದರು. ಇದೇ ವೇಳೆ ಸಾವರ್ಕರ್ ವಿರುದ್ಧ ಎಸ್’ಡಿಪಿಐ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠ0ದೂರ್ ಅವರ ಒತ್ತಡಕ್ಕೆ ಒಳಗಾಗಿ ಪೊಲೀಸರು ನಮ್ಮ ಸದಸ್ಯರನ್ನು ಬಂಧನಕ್ಕೊಳಪಡಿಸಿದ್ದಾರೆಂದು ಆರೋಪಿಸಿದ್ದಾರೆ. 

ಪಂಚಾಯತ್ ಅಧ್ಯಕ್ಷ ವಿನಯ ಅವರು ಮಾತನಾಡಿ, ಸ್ವಾತಂತ್ರ್ಯ ದಿನ ಆಚರಣೆ ಸಿದ್ಧತೆ ಕುರಿತ ಸಭೆಯಲ್ಲಿ ಮೆರವಣಿಗೆ ಕುರಿತು ಮಾತುಕತೆ ನಡೆಸಿದ್ದೆವು. ಸ್ಥಳೀಯರಿಗೆ ಸರ್ಕಾರಿ ಕಾರ್ಯಕ್ರಮಗಳನ್ನು ಪ್ರಚಾರ ಮಾಡಲು ಇದನ್ನು ಆಯೋಜಿಸಲಾಗಿತ್ತು ಎಂದು ತಿಳಿಸಿದ್ದಾರೆ. ಈ ನಡುವೆ ಮೆರವಣಿಗೆ ವೇಳೆ ಸಾವರ್ಕರ್ ಅವರ ಭಾವಚಿತ್ರ ಸೇರಿಸಿದ್ದಕ್ಕೆ ಪಂಚಾಯತ್ ಅಧ್ಯಕ್ಷರು ಮತ್ತು ಪಿಡಿಒಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಸ್ಥಳೀಯ ಪೊಲೀಸರಿಗೆ ಎಸ್’ಡಿಪಿಐ ಆಗ್ರಹಿಸಿದೆ. ಘಟನೆ ಸಂಬಂಧ ಕಬಕ ಪಿಡಿಒ ಆಶಾ ಅವರು ಆಜಿಜ್, ನೌಶದ್, ಶಮೀರ್, ಹ್ಯಾರಿಸ್, ಅಡ್ಡು, ತೌಸೀಫ್ ಮತ್ತು ಶಫೀ ಎಂಬ 7 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ಹಿನ್ನೆಲೆಯಲ್ಲಿ ಪೊಲೀಸರು ಇದೀಗ ಆಜೀಜ್, ಶಮೀರ್ ಹಾಗೂ ಅಬ್ದುಲ್ ರೆಹಮಾನ್ ಎಂಬುವವರನ್ನು ಬಂಧನ ಕ್ಕೊಳಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!