ಭವಿಷ್ಯದ ನೀರಿನ ಸವಾಲು ಎದುರಿಸಲು ಮಳೆ ನೀರು ಕೊಯ್ಲುಅಗತ್ಯ: ಜೋಸೆಫ್ ರೆಬೆಲ್ಲೋ
ಮಂದರ್ತಿ: ನಮ್ಮ ಜಲಜಾಗೃತಿಯ ಕೊರತೆಯಿಂದಾಗಿ ಅತ್ಯಂತ ಹೆಚ್ಚು ಮಳೆ ಪಡೆಯುವ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳೂ ಸಹ ನೀರಿನ ಸಮಸ್ಯೆ ಎದುರಿಸುತ್ತಿರುವುದು ಕಳವಳಕಾರಿಯಾಗಿದೆ ಎಂದು ಜಲತಜ್ಞ ಜೋಸೆಫ್ ರೆಬೆಲ್ಲೋ ತಿಳಿಸಿದ್ದಾರೆ.
ಮಂದರ್ತಿ ಸಮೀಪದ ಕಾಡೂರು ಗ್ರಾಮ ಪಂಚಾಯತ್ ನಲ್ಲಿ ಜರುಗಿದ “ಮಳೆನೀರು ಕೊಯ್ಲು ಕಲಿಕಾ ಭೇಟಿ ಹಾಗೂ ಪ್ರಾತ್ಯಕ್ಷಿಕೆ ಮತ್ತು ಘನ ಸಂಪನ್ಮೂಲ ನಿರ್ವಹಣೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ಪ್ರತಿಯೊಬ್ಬರೂ ಮಳೆನೀರು ಕೊಯ್ಲು ಅಳವಡಿಸಿಕೊಂಡಲ್ಲಿ ಅಂತರ್ಜಲ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದು ತಿಳಿಸಿದರು.
ಕಾಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾಂಡುರಂಗ ಶೆಟ್ಟಿ ನಡೂರು ಮಾತನಾಡಿ ಇಂತಹ ಕಲಿಕಾಭೇಟಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳಿಂದ ತ್ಯಾಜ್ಯ ವಿಲೇವಾರಿ ಹಾಗೂ ಜಲಸಂರಕ್ಷಣೆ ನಿಟ್ಟಿನಲ್ಲಿ ಮಾಹಿತಿ ವಿನಿಮಯ ಹಾಗೂ ಅನುಷ್ಠಾನಕ್ಕೆ ಸಹಕಾರಿ ಎಂದು ತಿಳಿಸಿದರು.ಕಾಡೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ. ಮಾತನಾಡಿ ಗ್ರಾಮ ಪಂಚಾಯತ್ ಮೂಲಕ ನೀರಿನ ಸಂರಕ್ಷಣೆ ಹಾಗೂ ದ್ರವತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳ ಮೂಲಕ ಅವಕಾಶವಿದ್ದು ಸಾರ್ವಜನಿಕರಿಗೆ ಮಾಹಿತಿ ನೀಡುವುದು ಅಗತ್ಯವಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಡುಪಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ,ಪುಣ್ಯ ಕೋಟಿ ಸಂಸ್ಥೆ ಮತ್ತು ಕಾಡೂರು ಪಂಚಾಯತ್ ಮೂಲಕ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಹೆಗ್ಗುಂಜೆ, ಕೊಕ್ಕರ್ಣೆ, ನೀಲಾವರ, ಹನೇಹಳ್ಳಿ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು,ಉಪಾಧ್ಯಕ್ಷರು,ಗ್ರಾಮ ಪಂಚಾಯಿತಿ ಸದಸ್ಯರು, ನೀರು ನೈರ್ಮಲ್ಯ ಸಮಿತಿಯ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.ಪುಣ್ಯಕೋಟಿ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರತಿನಿಧಿ ಗಳಾದ ನೇತ್ರಾವತಿ, ಪಾಂಡು,ದಿವಾಕರ್ ಮತ್ತು ಎಸ್ ಎಲ್ ಆರ್ ಎಮ್ ಘಟಕದ ಮೇಲ್ವಿಚಾರಕರು ಮತ್ತು ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.