ಉಡುಪಿ: ಆ.19 ನೂತನ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಜನಾಶೀರ್ವಾದ ಯಾತ್ರೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಶಯದಂತೆ ದೇಶಾದ್ಯಂತ ಕೇಂದ್ರ ಸಚಿವರ ನೇತೃತ್ವದಲ್ಲಿ ನೂತನ ಕೇಂದ್ರ ಸಚಿವರನ್ನು ಪರಿಚಯಿಸುವ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಪ್ರಚಲಿತಗೊಳಿಸುವ ನಿಟ್ಟಿನಲ್ಲಿ “ಜನಾಶೀರ್ವಾದ ಯಾತ್ರೆ”ಯು ಆಗಸ್ಟ್ 16ರಿಂದ ಪ್ರಾರಂಭಗೊಂಡಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಇಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕರ್ನಾಟಕ ರಾಜ್ಯದಾದ್ಯಂತ ನಾಲ್ಕು ಕೇಂದ್ರ ಸಚಿವರ ನೇತೃತ್ವದಲ್ಲಿ ನಡೆಯುತ್ತಿರುವ ಜನಾಶೀರ್ವಾದ ಯಾತ್ರೆಯು ಉಡುಪಿ ಜಿಲ್ಲೆಗೆ ನೂತನ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಆಗಸ್ಟ್ 18ರಂದು ಸಂಜೆ ಜಿಲ್ಲಾ ವ್ಯಾಪ್ತಿಯ ಹೆಬ್ರಿಗೆ ಆಗಮಿಸಲಿದೆ. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನೂತನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಜನಾಶೀರ್ವಾದ ಯಾತ್ರೆಯನ್ನು ಸ್ವಾಗತಿಸಲಾಗುವುದು ಎಂದು ಅವರು ಹೇಳಿದರು.

ಆ.19ರಂದು ವಿವಿಧ ನಿಯೋಜಿತ ಕಾರ್ಯಕ್ರಮಗಳ ಜೊತೆಗೆ ಬೆಳಿಗ್ಗೆ ಗಂಟೆ 11.00ಕ್ಕೆ ಉಡುಪಿ ಪುರಭವನದಲ್ಲಿ ನಡೆಯಲಿರುವ ಜನಾಶೀರ್ವಾದ ಯಾತ್ರೆಯ ಸಮಾವೇಶ ಮತ್ತು ನೂತನ ಕೇಂದ್ರ ಸಚಿವೆ ಅಭಿನಂದನಾ ಸಮಾರಂಭದಲ್ಲಿ ನೂತನ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆಯವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲೆಯ ನೂತನ ಸಚಿವರು, ಶಾಸಕರು, ಪಕ್ಷದ ಮುಖಂಡರು ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕುಯಿಲಾಡಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಮತ್ತು ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!