| ಉಡುಪಿ, ಆ. 14: ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್’ (ಎಂಐಸಿ) ದೇಶದ ಅತ್ಯುತ್ತಮ ಮಾಧ್ಯಮ ಮತ್ತು ಸಂವಹನ ಕಾಲೇಜು ಎಂಬ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಬಗ್ಗೆ ಪ್ರತಿಷ್ಠಿತ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳ 2021ನೆಯ ಸಾಲಿನ ರ್ಯಾಂಕಿಂಗ್ ಪಟ್ಟಿಗಳ ಪೈಕಿ ಔಟ್‌ಲುಕ್ ಇಂಡಿಯ ಆ್ಯಂಡ್ ಎಜುಕೇಶನ್ ವರ್ಲ್ಡ್ ಸಂಸ್ಥೆಯ ಸಮೀಕ್ಷೆಯಂತೆ 3ನೇ ರ್ಯಾಂಕ್, ಇಂಡಿಯ ಟುಡೆ ಮತ್ತು ದಿ ವೀಕ್ ಸಮೀಕ್ಷೆಯಂತೆ 6ನೇ ರ್ಯಾಂಕ್ ಅನ್ನು ಪಡೆದಿದೆ.
ಈ ನಿಯತಕಾಲಿಕೆಗಳು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿಗೆ ಸಮೀಕ್ಷೆ ನಡೆಸಿ ಸ್ಥಾನಗಳನ್ನು ನೀಡುತ್ತವೆ. ಮೂಲಸೌಕರ್ಯ ಕೈಗಾರಿಕಾ ಸಂವಹನ, ಉದ್ಯೋಗ ಪ್ರಾಪ್ತಿ, ಸಂಶೋಧನ ಶ್ರೇಷ್ಠತೆ ಇತ್ಯಾದಿ ಮಾನದಂಡಗಳಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಒಟ್ಟಾರೆ ಗಳಿಸಿದ ಅಂಕಗಳ ಆಧಾರದಲ್ಲಿ ರ್ಯಾಂಕಿಂಗ್ ನೀಡಲಾಗುತ್ತದೆ.
ಇನ್ನು ಈ ಬಗ್ಗೆ ಎಂಐಸಿ ನಿರ್ದೇಶಕಿ ಡಾ. ಪದ್ಮಾ ರಾಣಿ ಅವರು ಪ್ರತಿಕ್ರಿಯೆ ನೀಡಿ ಬೋಧಕರು, ಬೋಧಕೇತರರು ಹಾಗೂ ವಿದ್ಯಾರ್ಥಿಗಳ ಜಂಟಿ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ನಮ್ಮ ಸಾಧನೆಗಳ ಹಿಂದೆ ಮಾಹ ಎ.ವಿ. ನೀಡಿದ ಮಾರ್ಗದರ್ಶನ ಮತ್ತು ಬೆಂಬಲ ಮುಖ್ಯ. ನಮ್ಮಲ್ಲಿ ಇತ್ತೀಚೆಗಿನ ಬೋಧನಕ್ರಮ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಲಾಗುತ್ತದೆ.
ಬಹುಸಂಸ್ಕೃತಿಗಳಿಗೆ ತೆರೆದುಕೊಳ್ಳುವುದರ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಬೆಳೆಸಲು ಮಣಿಪಾಲ ಪ್ರಭಾವಲಯ ಸಹಕರಿಸುತ್ತದೆ’ ಎಂದು ಹೇಳಿದ್ದಾರೆ. 1997ರಲ್ಲಿ ಆರಂಭಗೊಂಡ ಎಂಐಸಿ ಎರಡು ದಶಕಗಳಲ್ಲಿ ಮಾಧ್ಯಮ ಉದ್ಯಮ ಕ್ಷೇತ್ರಕ್ಕೆ ತರಬೇತಿ ಹೊಂದಿದ ಗಣನೀಯ ಪ್ರಮಾಣದ ಮಾನವ ಸಂಪನ್ಮೂಲವನ್ನು ಒದಗಿಸಿದೆ. ಎಂಐಸಿ ಕೈಗಾರಿಕೆ ಕೌಶಲಕ್ಕೆ ಅಗತ್ಯವಾದ ಪ್ರಾಯೋಗಿಕ ತರಬೇತಿಯೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. | |