ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆ- ಎಲ್ಲಾ ಮನೆಗಳಿಗೆ ಬೆಳಕು ಯೋಜನೆ- ಸುನಿಲ್

ಉಡುಪಿ ಆ.15 (ಉಡುಪಿ ಟೈಮ್ಸ್ ವರದಿ): ದೇಶ ಮೊದಲು ಎನ್ನುವ ಕಲ್ಪನೆ ಭಾಷಣಕ್ಕೆ ಸೀಮಿತಗೊಳಿಸದೆ ನಮ್ಮ ಆಲೋಚನೆಗೆ ತಂದು ಅದನ್ನು ಕಾರ್ಯರೂಪದಲ್ಲಿ ಜಾರಿಗೊಳಿಸಿದಾಗ ಭಾರತ ಎಲ್ಲಾ ಕ್ಷೇತ್ರದಲ್ಲಿಯೂ ಎದ್ದು ನಿಲ್ಲಲು ಸಹಕಾರಿಯಾಗಿತ್ತದೆ. ಈ ಮೂಲಕ ಭಾರತವನ್ನು ವಿಶ್ವಗುರುವಾಗಿಸಲು ಸಾಧ್ಯವಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಅವರು ಹೇಳಿದ್ದಾರೆ.

75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾಡಳಿತ ವತಿಯಿಂದ ನಗರದ ಅಜ್ಜರಕಾಡು ಮೈದಾನದಲ್ಲಿ ಆಯೋಜಿಸಿದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಸಾಧಿಸುತ್ತಿದ್ದು, ಇಂದು ಬಹಳ ದೊಡ್ಡ ಪ್ರಮಾಣದಲ್ಲಿ ಭಾರತ ಶಕ್ತಿ ಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ದೇಶ ಮೊದಲು ಎಂಬ ಕಲ್ಪನೆ ಬಹಳ ದೊಡ್ಡ ಪ್ರಮಾಣದ್ದು ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಜಾದಿ ಕಾ ಅಮೃತ ಮಹೋತ್ಸವ ಎಂಬ ಕಲ್ಪನೆ ಯಡಿಯಲ್ಲಿ ವರ್ಷಪೂರ್ತಿ ಬೇರೆ ಬೇರೆ ಕಾರ್ಯಕ್ರಮ ಗಳನ್ನು ಮಾಡಬೇಕು ಎಂದು ಕರೆ ನೀಡಿದ್ದಾರೆ.

ಅಂದಿನಿಂದ ಇಂದಿನ‌ ತನಕ ದೇಶದಲ್ಲಿ ಅಭಿವೃದ್ಧಿಗಳು ಹಂತ ಹಂತವಾಗಿ ಆಗುತ್ತಿದ್ದರೂ ಪರಿಪೂರ್ಣತೆ ಕಂಡು ಬಂದಿಲ್ಲ. ಇದಕ್ಕೆ ಕಾರಣ ಸ್ವಾತಂತ್ರ್ಯ ನಂತರ ದೇಶ ಮೊದಲು ಎನ್ನುವ ಕಲ್ಪನೆ ಆರಂಭ ಆಗದಿರುವುದು. ಸ್ವಾತಂತ್ರ್ಯ ಬಂದ ನಂತರ ದೇಶ ಮೊದಲು ಎನ್ನುವ ಕೆಲಸ ನಾವು ಮಾಡಿದ್ದರೆ, ಸರ್ಕಾರಗಳನ್ನು ನಡೆಸಿದ್ದರೆ ಇಂದು ಭಾರತ ಬಹಳ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾಣುತ್ತಿತ್ತು. ಇದೀಗ ಮತ್ತೊಮ್ಮೆ ನಿಧಾನವಾಗಿ ದೇಶ ಮೊದಲು ಎಂಬ ಪರಿಕಲ್ಪನೆಯೊಂದಿಗೆ ದೇಶದಲ್ಲಿ ಅಭಿವೃದ್ಧಿ  ಚಟುವಟಿಕೆಗಳು ಆರಂಭ ಗೊಂಡಿದೆ. 

ದೇಶ ಮೊದಲು ಎನ್ನುವುದು ಭಾಷಣದ ವಸ್ತುವಲ್ಲ ಅದು ನಡವಳಿಕೆಯಲ್ಲಿ ಬರಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯಪ್ರವೃತ್ತರಾಗಬೇಕಿದೆ. ಭಾರತದ ಆಯುರ್ವೇದವನ್ನು ಜಗತ್ತಿನ ಎಲ್ಲಾ ರಾಷ್ಟ್ರಗಳು ಒಪ್ಪಿಕೊಳ್ಳಲಾರಂಬಿಸಿದೆ. ನಮ್ಮ ದೇಶದ ಸಾಧಕರು ಬಹಳ ದೊಡ್ಡ ಪ್ರಮಾಣದಲ್ಲಿ ಸಾಧನೆ ಮಾಡುತ್ತಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಭಾತರ ಶೀಘ್ರವಾಗಿ ವಿಶ್ವಗುರು ಆಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ಮಾತು ಮುಂದುವರೆಸಿದ ಅವರು, ಭಾರತ ಸೂಪರ್ ಪವರ್ ಆಗಬೇಕು ಎಂಬ ಡಾ.ಅಬ್ದುಲ್ ಕಲಾಂ ಅವರ ಆಶಯದಂತೆ ಪ್ರಧಾನಿ ನರೇಂದ್ರ ಮೋದಿಯವರ ನವಭಾರತ ನಿರ್ಮಾಣ ಕಲ್ಪನೆಯಡಿಯಲ್ಲಿ ಭಾರತದ ಎಲ್ಲಾ ರಂಗದಲ್ಲಿ ಕೆಲಸಗಳು ಆರಂಭವಾಗಲಿದೆ. ಈ  ನೆಲೆಯಲ್ಲಿ ಎಲ್ಲರೂ ಕೈಜೋಡಿಸಬೇಕು ಹಾಗೂ  ಸಮೂಹ ಮತ್ತು ವಯಕ್ತಿಕ ನೆಲೆಯಲ್ಲಿ ಸಹಕಾರ ನೀಡಿದಾಗ ನವಭಾರತ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು.ಸಚಿವನಾಗಿ ಸಿಕ್ಕಿರುವಸೀಮಿತ ಅವಕಾಶದಲ್ಲಿ ಅದನ್ನು ಉತ್ತಮವಾಗಿ ಬಳಸುತ್ತಾ ಉಡುಪಿ ಜಿಲ್ಲೆಯೂ ಎಲ್ಲಾ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಕಾಣಬೇಕು ಎಂಬ ಕನಸನ್ನು ಇಟ್ಟುಕೊಂಡು ಕಾರ್ಯ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಇನ್ನು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿರುವ ಎಲ್ಲಾ ಮನೆಗಳಿಗೆ ಬೆಳಕನ್ನು ನೀಡುವ ಉದ್ದೇಶ ಹೊಂದಿದ್ದು, ಈ ದಿಸೆಯಲ್ಲಿ ರಾಜ್ಯದಲ್ಲಿ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಯ ಯೋಜನೆ ಹೊಂದಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲಿ ಕ್ರಿಯಾ ಯೋಜನೆಯನ್ನು ರೂಪಿಸುವುದಾಗಿ ತಿಳಿಸಿದರು.ಇನ್ನು ಕನ್ನಡ ಸಂಸ್ಕೃತಿ ಇಲಾಖೆಯಲ್ಲಿಯೂ ಇತರ ಇಲಾಖೆಗಳಂತೆ ನೀತಿಯನ್ನು ರಚಿಸುವ ಸಲುವಾಗಿ ಹಿರಿಯರ ಸಮಿತಿ ರಚನೆ ಮಾಡಿ ಶೀಘ್ರವಾಗಿ ವರದಿ ತರಿಸಿಕೊಂಡು ನೂತನ ನೀತಿಯನ್ನು ಇಲಾಖೆಗೆ ನೀಡುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ರಘುಪತಿ ಭಟ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಡಾ.ನವೀನ್ ಭಟ್, ನಗರ ಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!