ಕೊರೋನಾ ಯೋಧರಿಗೆ ಮಸಿ ಬಳಿಯಬೇಡಿ: ಡಾ.ಕೆ.ಸುಧಾಕರ್
ಬೆಂಗಳೂರು: ಮಾರಕ ಕೊರೋನಾ ವೈರಸ್ ವಿರುದ್ಧ ಜೀವದ ಹಂಗು ತೊರೆದು ಹೋರಾಡುತ್ತಿರುವ ಕೊರೋನಾ ಯೋಧರಿಗೆ ಮಸಿ ಬಳಿಯಬೇಡಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಬೆಂಗಳೂರಿನ ಹಲವರು ತಮ್ಮ ಊರುಗಳಿಗೆ ತೆರಳುತ್ತಿದ್ದಾಗ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ವ್ಯಕ್ತಿಯೊಬ್ಬರು ಹೇಳಿಕೆ ನೀಡಿ ಸರ್ಕಾರವನ್ನು ಟೀಕಿಸಿದ್ದರು. ಬೆಂಗಳೂರು ಮತ್ತು ಬಿಜೆಪಿ ಸರ್ಕಾರದ ಸಹವಾಸ ಸಾಕು, ತಾವು ತಮ್ಮ ಊರಿಗೆ ಹೋಗಿ ಬದುಕುತ್ತೇವೆ, ಕೊರೊನಾ ಪರೀಕ್ಷೆ ಮಾಡಿಸಲು 4000 ರೂಪಾಯಿ ಕೇಳುತ್ತಿದ್ದಾರೆ, ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವ್ಯಕ್ತಿಯೊಬ್ಬರು ವಾಹಿನಿಗೆ ಹೇಳಿಕೆ ನೀಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು.
ಇದೇ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಸಚಿವ ಸುಧಾಕರ್ ಅವರು, ‘ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ನಾವೆಲ್ಲರೂ ಯೋಧರೇ. ಕ್ಷುಲ್ಲಕ ರಾಜಕಾರಣಕ್ಕಾಗಿ ಸುಳ್ಳು ಸುದ್ದಿ ಹರಡುವ, ಇಡೀ ಸಮಾಜ ಒಗ್ಗಟ್ಟಿನಿಂದ ಇರಬೇಕಾದ ಈ ಸಂದರ್ಭದಲ್ಲಿ ಒಡಕು ಮೂಡಿಸಲು ಪ್ರಯತ್ನಿಸುವ, ಹಗಲಿರುಳು ದುಡಿಯುತ್ತಿರುವ ಸರ್ಕಾರ ಮತ್ತು ಕೊರೊನಾ ಯೋಧರಿಗೆ ಮಸಿ ಬಳಿಯುವ ಈ ದುಷ್ಕೃತ್ಯವನ್ನು ಜನ ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.
ಸಚಿವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್‌ಲೋಡ್ ಮಾಡಿ, ತಾನು 15 ಸಾವಿರ ಸಂಬಳ ಪಡೆಯುವ ವಲಸೆ ಕಾರ್ಮಿಕನಂತೆ ಮಾತನಾಡಿ, ಬಿಜೆಪಿಯನ್ನು ತೆಗಳಿ, ಹಳ್ಳಿಗೆ ಹೋಗುವವನಂತೆ ನಟಿಸಿದ್ದಾನೆ ಎಂದು ಆ ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.