ದೇವಾಡಿಗ ಸಂಘ ಮುಂಬೈ: ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ, ವಿದ್ಯಾರ್ಥಿ ವೇತನ
ಉಡುಪಿ ಆ.14(ಉಡುಪಿ ಟೈಮ್ಸ್ ವರದಿ): ದೇವಾಡಿಗ ಸಂಘ ಮುಂಬೈ ಇದರ ವತಿಯಿಂದ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಮತ್ತು ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.
ಈ ಬಗ್ಗೆ ದೇವಾಡಿಗ ಸಂಘ ಮುಂಬೈ ಪ್ರಕಟಣೆ ಹೊರಡಿಸಿದ್ದು,ಅದರಂತೆ ದೇವಾಡಿಗ ಸಂಘ ಮುಂಬೈ 2025ರಲ್ಲಿಶತಮಾನೋತ್ಸವ ಆಚರಿಸುತ್ತಿದ್ದು ಈ ಸಂಭ್ರಮಾಚರಣೆಗೆ ಪೂರ್ವಭಾವಿ ಸಿದ್ಧತೆಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸಂಘವು ಡಿಎಸ್‍ಎಂ ಅಧ್ಯಯನ ಮತ್ತು ಸಂಶೋಧನಾ ವೇದಿಕೆಯನ್ನು ಉತ್ತೇಜಿಸುವಲ್ಲಿ ವಿಶೇಷ ಯೋಜನೆಯನ್ನು ಪ್ರಾರಂಭಿಸಿದ್ದು, ಈ ಮೂಲಕ ಅರ್ಹ ಸಮುದಾಯದ ವಿದ್ಯಾರ್ಥಿಗಳನ್ನು ಯುಪಿಎಸ್‍ಸಿ/ಎಂಒಎಸ್‍ಸಿ/ಕೆಎಎಸ್‍ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತೇಜಿಸಲು ತರಬೇತಿಯನ್ನು ಆಯೋಜಿಸುವುದು ಮತ್ತು ಹಣಕಾಸಿನ ನೆರವು ನೀಡಲು ಮುಂದಾಗಿದೆ.
ಆಸಕ್ತ ಪ್ರತಿಭಾವಂತ ಪದವೀಧರ ವಿದ್ಯಾರ್ಥಿಗಳು (ವಯಸ್ಸು 30ಕ್ಕೆ ಮೀರಿರಬಾರದು) ತಮ್ಮ ಹೆಸರು, ಹೆತ್ತವರ ಹೆಸರು, ವಿಳಾಸ, ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ತಮ್ಮ ಪದವಿ ಕೋರ್ಸಿನಲ್ಲಿ ಪಡೆದಂತಹ ಅಂಕಗಳ ವಿವರಗಳನ್ನು ದೇವಾಡಿಗ ಸಂಘ ಮುಂಬೈಯ [email protected] ಇಮೇಲ್ ವಿಳಾಸಕ್ಕೆ ಆ.31ರ ಒಳಗೆ ಕಳುಹಿಸಬೇಕಾಗಿದೆ.
ಸ್ಥಳೀಯ ದೇವಾಡಿಗ ಸಂಘಟನೆಗಳೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ. ವಿವರಗಳನ್ನು ಸಂಗ್ರಹಿಸಿ ದೇವಾಡಿಗ ಸಂಘ ಮುಂಬೈಗೆ ಶಿಫಾರಸ್ಸು ಮಾಡಬೇಕಾಗಿ ವಿನಂತಿಸಲಾಗಿದೆ. ಇದರೊಂದಿಗೆ ಹತ್ತನೇ ತರಗತಿಯಲ್ಲಿ ಮತ್ತು ಪಿಯುಸಿ/ಎಚ್‍ಎಸ್‍ಸಿ ಪರೀಕ್ಷೆಗಳಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಆಸಕ್ತ ವಿದ್ಯಾರ್ಥಿಗಳಿಗೂ ಪೂರ್ವಭಾವಿ ತಯಾರಿಗಾಗಿ ಪ್ರೋತ್ಸಾಹ ನೀಡಲಾಗುವುದು. ಅಂತಹ ವಿದ್ಯಾರ್ಥಿಗಳ ವಿವರಗಳನ್ನೂ ಕಳುಹಿಸಬೇಕಾಗಿ ವಿನಂತಿಸಿದ್ದಾರೆ.
ಈ ಅಭಿಯಾನದಲ್ಲಿ ಸಮಾಜದ ಸಂಘಟನೆಗಳು ಮತ್ತು ಸಮಾಜ ಭಾಂಧವರು ಸಕ್ರೀಯರಾಗಿ ಭಾಗವಹಿಸಿ ಸದೃಢ ಮತ್ತು ಪ್ರಬಲ ಶಿಕ್ಷಿತರಾಗಿ ದೇಶದ ಪ್ರಗತಿಯಲ್ಲಿ ಪಾಲುದಾರರಾಗುವಂತೆ ದೇವಾಡಿಗ ಸಂಘ ಮುಂಬೈಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.