ಪಡುಬಿದ್ರಿ: ಮಾದಕ ವಸ್ತು ಸಾಗಾಟ- ಓರ್ವನ ಬಂಧನ
ಪಡುಬಿದ್ರಿ ಆ.14(ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ರಹಿಮಾನ್( 49 ) ಬಂಧಿತ ಆರೋಪಿ. ಬಂಧಿತನಿಂದ, ಅಂದಾಜು 17,810 ರೂ ಮೌಲ್ಯದ 356.190 ಗ್ರಾಂ ತೂಕದ ಗಾಂಜಾ, 2,000 ರೂ ಮೌಲ್ಯದ 61.430 ಗ್ರಾಂ ತೂಕದ ಪೌಡರ್ ರೂಪದ ಮಾದಕ ವಸ್ತು, ಕೃತ್ಯಕ್ಕೆ ಬಳಸಿದ ಕಾರು, ಮೊಬೈಲ್ ಫೋನ್, 720 ರೂ ನಗದು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ದಿಲೀಪ್ ಜಿ ಆರ್ ಅವರು ನಿನ್ನೆ ಇತರ ಸಿಬ್ಬಂದಿಗಳೊಂದಿಗೆ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವ ಸ್ವಾಗತ ಗೋಪುರದ ಹತ್ತಿರ ಪಡುಬಿದ್ರಿ – ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಕಾರ್ಕಳ ಕಡೆಯಿಂದ ಬರುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಮಧ್ಯಾಹ್ನದ ವೇಳೆಗೆ ಕಾರ್ಕಳ ಕಡೆಯಿಂದ ಬಂದ ಕಾರನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಕಾರಿನ ಡಿಕ್ಕಿಯಲ್ಲಿ ಕಪ್ಪು ಟೇಪ್ ನಿಂದ ಸುತ್ತಿದ್ದ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಎಲೆ, ಮೊಗ್ಗು, ದಂಟು, ಕಾಂಡ ಮಿಶ್ರಿತ ಗಾಂಜಾದಂತ ತೇವಭರಿತವಾದ ವಸ್ತು ಹಾಗೂ ಮತ್ತೊಂದು ಪ್ಯಾಕೆಟ್ ನಲ್ಲಿ ಬಿಳಿ ಬಣ್ಣದ ಪೌಡರ್ ರೂಪದಲ್ಲಿ ಮಾದಕ ವಸ್ತು ಪತ್ತೆಯಾಗಿತ್ತು. ಈ ವೇಳೆ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಆತನ ಬಳಿ ಇದ್ದ ಮಾದಕ ವಸ್ತು ಹಾಗೂ ಇತರೆ ಸೊತ್ತನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.