ಬ್ರಹ್ಮಾವರ: ಕೆಲಸದ ಒತ್ತಡ – ವಿದೇಶದಿಂದ ಬಂದ ಯುವಕ ಆತ್ಮಹತ್ಯೆ
ಬ್ರಹ್ಮಾವರ ಆ.14(ಉಡುಪಿ ಟೈಮ್ಸ್ ವರದಿ): ನೇಣು ಬಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಹೆಗ್ಗುಂಜೆ ಗ್ರಾಮದ, ಮಂದಾರ್ತಿಯಲ್ಲಿ ನಡೆದಿದೆ.
ಹರ್ಷ ಆಚಾರ್ಯ (33) ಆತ್ಮಹತ್ಯೆ ಮಾಡಿಕೊಂಡವರು.ಇವರು 2019 ರಲ್ಲಿ ಲಂಡನ್ಗೆ ತೆರಳಿ ಅಲ್ಲಿ ಪ್ರೊಜೆಕ್ಟ್ ಕೆಲಸ ಮಾಡಿಕೊಂಡಿದ್ದರು. ಲಾಕ್ಡೌನ್ ಹಿನ್ನೆಲೆ 2020 ರ ಜುಲೈ ನಲ್ಲಿ ಊರಿಗೆ ಬಂದಿದ್ದರು. ಊರಿನಲ್ಲಿ ಮನೆಯಿಂದಲೇ ತಮ್ಮ ಕೆಲಸ ಮಾಡುತ್ತಿದ್ದ ಅವರು ಪ್ರಾಜೆಕ್ಟ್ ವಿಚಾರದಲ್ಲಿ ಕಷ್ಟ ಆಗುತ್ತಿರುವ ಬಗ್ಗೆ ಮನೆಯಲ್ಲಿ ಹೇಳಿಕೊಂಡಿದ್ದರು.
ಅದರಂತೆ ಆ.13 ರಂದು ಕೆಲಸದ ಸಲುವಾಗಿ ಮನೆಯ ತಾರಸಿ ಮೇಲಿನ ಕೋಣೆಗೆ ಹೋದವರು ಆತ್ಮಹತ್ಯೆಗೆ ಮುಂದಾಗಿದ್ದಾರೆ. ನೇಣು ಬಿಗಿದು ನೇತಾಡುತ್ತಿದ್ದ ಅವರನ್ನು ತಕ್ಷಣ ಕೆಳಗಿಳಿಸಿದ ಮನೆಯವರು ಚಿಕಿತ್ಸೆಗಾಗಿ ಮಂದಾರ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ಹರ್ಷ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.