ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ನ್ಯಾಯಾಲಯದಿಂದ ಮಹತ್ವದ ತೀರ್ಪು
ಉಡುಪಿ, ಆ.13: ಉಡುಪಿ ಜಿಲ್ಲೆ, ಉಡುಪಿ ತಾಲ್ಲೂಕು ಅಂಜಾರು ಗ್ರಾಮದ ಸುಮಾರು 11 ಎಕ್ರೆಗೂ ಮಿಕ್ಕಿ ಸರ್ಕಾರಿ ಜಮೀನನ್ನು ತನ್ನದೆಂದು ಘೋಷಿಸುವಂತೆ, ಅಂಜಾರು ಗ್ರಾಮದ ದಿ.ಬಾಲಕೃಷ್ಣ ಹೆಗ್ಡೆ ಹಾಗೂ ಇತರರು ರಾಜ್ಯ ಸರ್ಕಾರದ ವಿರುದ್ಧ ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು (ಹಿರಿಯ ವಿಭಾಗ) ದಲ್ಲಿ ವ್ಯಾಜ್ಯ ದಾಖಲಿಸಿದ್ದರು. ಸದ್ರಿ ವ್ಯಾಜ್ಯವನ್ನು ಮಾನ್ಯ ಮಾಡಿದ ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಲಯ (ಹಿರಿಯ ವಿಭಾಗ) 28.09.2004 ರಂದು ವಾದಿಯರ ಪರ ತೀರ್ಪು ನೀಡಲಾಗಿತ್ತು.
ಸದ್ರಿ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರವು ಉಡುಪಿಯ ಪ್ರಧಾನ ಜಿಲ್ಲಾ ನ್ಯಾಯಾಲಯದಲ್ಲಿ ನಿಯತಕಾಲಿಕ ಮೇಲ್ಮನವಿಯನ್ನು ದಾಖಲಿಸಿತ್ತು. ಸದ್ರಿ ಮೇಲ್ಮನವಿಯನ್ನು ಆಲಿಸಿದ, ಪ್ರಧಾನ ಜಿಲ್ಲಾ ನ್ಯಾಯಾಲಯವು ಆ.10 ರಂದು ನೀಡಿದ ತನ್ನ ತೀರ್ಪಿನನ್ವಯ, ಕೆಳ ನ್ಯಾಯಾಲಯವು ನೀಡಿದ ತೀರ್ಪನ್ನು ರದ್ದುಪಡಿಸಿದೆ. ಸದ್ರಿ ಮೇಲ್ಮನವಿಯಲ್ಲಿ ಸರ್ಕಾರದ ಪರವಾಗಿ ಜಿಲ್ಲಾ ಸರ್ಕಾರಿ ವಕೀಲ ಸಂತೋಷ ಹೆಬ್ಬಾರ್ ಎ. ವಾದ ಮಂಡಿಸಿದ್ದರು. ಜಿಲ್ಲಾಧಿಕಾರಿ ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ರವರ ಮಾರ್ಗದರ್ಶನದಲ್ಲಿ ಉಡುಪಿ ತಾಲೂಕು ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಹಾಗೂ ಉಪ ತಹಶೀಲ್ದಾರ್ ಸಿ.ಎಲ್. ಸುರೇಂದ್ರ ಬಾಬು ರವರು ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸಿ ಸಹಕರಿಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.