ವೈದ್ಯಕೀಯ ಕಿಟ್ನಲ್ಲಿ ಅವ್ಯವಹಾರ, ಲೋಪದೋಷ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಸಿಎಂ
ಬೆಂಗಳೂರು: ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿರುವುದು ಕಂಡುಬಂದರೆ ಅಧಿಕಾರಿಗಳು ಅಥವಾ ಯಾವುದೇ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಬಂದು ಎಲ್ಲಾ ಅಂಕಿಅಂಶಗಳನ್ನು ನೋಡಲಿ, ಅಧಿಕಾರಿಗಳು ಎಲ್ಲಾ ದಾಖಲೆಗಳನ್ನು ವಿರೋಧ ಪಕ್ಷದ ನಾಯಕರಿಗೆ ನೀಡುತ್ತಾರೆ. ಎಲ್ಲವನ್ನೂ ಸಿದ್ದರಾಮಯ್ಯ ಪರಿಶೀಲನೆ ಮಾಡಲಿ. ಈಗಾಗಲೇ ಕೆಲವೊಂದು ಲೋಪದೋಷಗಳನ್ನು ಸರಿಪಡಿಸಿದ್ದೇವೆ. ಒಂದು ವೇಳೆ ಲೋಪದೋಷ ಕಂಡುಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಅದು ಯಾವುದೇ ಯಾವುದೇ ವ್ಯಕ್ತಿಯಾಗಿರಬಹುದು, ಅಂತಹವರ ವಿರುದ್ಧ ತೀವ್ರ ತರನಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಆದರೆ ದಾಖಲೆಗಳಿಲ್ಲದೆಯೇ ಸಿದ್ದರಾಮಯ್ಯ ಹಿಂದಿನಿಂದಲೂ ಆರೋಪ ಮಾಡುತ್ತಾ ಬಂದಿದ್ದಾರೆ. ಅವರು ಬಂದು ಖುದ್ದು ವಿಧಾನಸೌಧದಲ್ಲಿ ಬಂದು ಕುಳಿತು ಎಲ್ಲಾ ದಾಖಲೆ ಪರಿಶೀಲಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಲಿ ಎಂದು ಯಡಿಯೂರಪ್ಪಪ ಹೇಳಿದರು.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಎಲ್ಲಾ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಈಗಾಗಲೇ 450ಕ್ಕಿಂತ ಹೆಚ್ಚು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಯಾವ ಕಾರಣಕ್ಕೂ ಜನರು ಗಾಬರಿಯಾಗುವ ಅಗತ್ಯವಿಲ್ಲ. ಈ ಪಿಡುಗಿನ ಜೊತೆಯೇ ನಾವು ಬದುಕಬೇಕಾಗಿದೆ. ಆದ್ದರಿಂದ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರದ ಜೊತೆ ಸಹಕರಿಸಿದರೆ ಸೋಂಕು ನಿಯಂತ್ರಣ ಮಾಡಬಹುದು, ಅದು ಬಿಟ್ಟು ಬೇರೆ ಮಾರ್ಗವಿಲ್ಲ. ಇದನ್ನೇ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಹೇಳಿದ್ದಾರೆ ಎಂದು ಹೇಳಿದರು.
ಈಗಾಗಲೇ ಬೆಂಗಳೂರಿನಲ್ಲಿ ಸೋಂಕಿತರ ಚಿಕಿತ್ಸೆಗಾಗಿ 10 ಸಾವಿರ ಬೆಡ್ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಯಾವುದೇ ಕೊರತೆಯಾಗದಂತೆ ಕ್ರಮಕೈಗೊಳ್ಳುತ್ತಿದ್ದೇವೆ, ಆದ್ದರಿಂದ ಎಲ್ಲರೂ ಸಹಕಾರ ನೀಡಬೇಕು ಎಂದು ಬೆಂಗಳೂರು ಮಹಾನಗರ ಜನತೆಯಲ್ಲಿ ಮನವಿ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.