ತಮಿಳುನಾಡು: ಪೆಟ್ರೋಲ್’ಗೆ 3 ರೂ. ಇಳಿಸಿದ ರಾಜ್ಯ ಸರಕಾರ
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಜ್ಯದ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ್ದು, ಪೆಟ್ರೋಲ್ ಮೇಲಿನ ಸೆಸ್ ಕಡಿಮೆ ಮಾಡಿದ್ದಾರೆ. ಇದರಿಂದ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 3 ರೂಪಾಯಿ ಅಗ್ಗವಾಗಲಿದೆ.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಸೂಚನೆಯಂತೆ ರಾಜ್ಯ ಸರ್ಕಾರ ಪೆಟ್ರೋಲ್ ಮೇಲಿನ ಸೆಸ್ ಅನ್ನು ಪ್ರತಿ ಲೀಟರ್‌ಗೆ 3 ರೂಪಾಯಿ ಕಡಿಮೆ ಮಾಡುತ್ತಿದೆ ಎಂದು ತಮಿಳುನಾಡು ಹಣಕಾಸು ಸಚಿವರು ಹೇಳಿದ್ದಾರೆ.
ಸೆಸ್ ಕಡಿಮೆ ಮಾಡಿರುವುದರಿಂದ ರಾಜ್ಯ ಸರ್ಕಾರಕ್ಕೆ 1160 ಕೋಟಿ ಆದಾಯ ನಷ್ಟವಾಗುತ್ತದೆ ಎಂದು ತಮಿಳುನಾಡು ಹಣಕಾಸು ಸಚಿವ ಪಿಟಿಆರ್ ಪಳನಿವೇಲ್ ತ್ಯಾಗರಾಜನ್ ಅವರು ತಿಳಿಸಿದ್ದಾರೆ.
ಡಿಎಂಕೆ ನೇತೃತ್ವದ ಸರ್ಕಾರ ಶುಕ್ರವಾರ ತನ್ನ ಮೊದಲ ಬಜೆಟ್ ಮಂಡಿಸಿತು. ಹಣಕಾಸು ಸಚಿವ ಪಲನ್ವೇಲ್ ತ್ಯಾಗರಾಜನ್ ಅವರು ಇದೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡಿಸಿದರು. ಈ ವೇಳೆ, ರಾಜ್ಯ ಸರ್ಕಾರಿ ನೌಕರರಿಗೆ ಏಪ್ರಿಲ್ 2022 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ಡಿಎ ಹಾಗೂ ಮಹಿಳಾ ಪೌರಕಾರ್ಮಿಕರ ಹೆರಿಗೆ ರಜೆಯನ್ನು 9 ತಿಂಗಳಿಂದ 12 ತಿಂಗಳಿಗೆ ಹೆಚ್ಚಿಸುವುದು ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿದರು.