ಪರಿಸರ ಮಾಲಿನ್ಯ ಮಾಡುವ ವಾಹನಗಳನ್ನು ಹಂತಹಂತವಾಗಿ ಕೈಬಿಡಲು ಗುಜರಿ ನೀತಿಯಿಂದ ಸಾಧ್ಯ- ಪ್ರಧಾನಿ ಮೋದಿ

ಗಾಂಧಿನಗರ: ‘ಬಳಕೆಗೆ ಯೋಗ್ಯವಲ್ಲದ ಹಾಗೂ ಪರಿಸರಕ್ಕೆ ಹೆಚ್ಚು ಮಾಲಿನ್ಯ ಮಾಡುವಂತಹ ವಾಹನಗಳನ್ನು ಹಂತಹಂತವಾಗಿ ಕೈಬಿಡಲು ಗುಜರಿ ನೀತಿಯಿಂದ ಸಾಧ್ಯವಾಗಲಿದೆ. ಆವರ್ತ ಆರ್ಥಿಕತೆಯನ್ನು ಸಹ ಈ ನೀತಿ ಉತ್ತೇಜಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.

ಗುಜರಾತ್‌ನಲ್ಲಿ ನಡೆದ ಹೂಡಿಕೆದಾರರ ಸಮಾವೇಶವನ್ನು ಉದ್ದೇಶಿಸಿ ವರ್ಚುವಲ್‌ ವಿಧಾನದ ಮೂಲಕ ಮಾತನಾಡಿದ ಸಂದರ್ಭದಲ್ಲಿ ಅವರು ಈ ನೀತಿಗೆ ಚಾಲನೆ ನೀಡಿದರು.

‘ಯಾವುದೇ ಒಂದು ಉತ್ಪನ್ನ ದೀರ್ಘ ಬಾಳಿಕೆ ಬರುವಂತಿರಬೇಕು. ನಂತರ ಅದರ ಮರುಬಳಕೆ ಹಾಗೂ ನವೀಕರಣ ಸಾಧ್ಯವಾಗಬೇಕು. ಇಂಥ ಅರ್ಥವ್ಯವಸ್ಥೆಯನ್ನು ಆವರ್ತ ಆರ್ಥಿಕತೆ ಎನ್ನಬಹುದು. ಇದರಿಂದ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಬಹುದು’ ಎಂದು ಹೇಳಿದರು.

‘ಬಳಕೆಗೆ ಯೋಗ್ಯವಾಗಿರದ ವಾಹನಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬಹುದು. ವಾಹನಗಳ ಬಳಕೆಗೆ ಆಧುನಿಕತೆಯ ಸ್ಪರ್ಶ ಸಿಗುವ ಜೊತೆಗೆ, ‘ತ್ಯಾಜ್ಯದಿಂದ ಸಂಪತ್ತು’ ಕಾರ್ಯಕ್ರಮದಲ್ಲಿ ಈ ನೀತಿ ಮಹತ್ವದ ಪಾತ್ರ ವಹಿಸುವುದು’ ಎಂದರು.

‘ದೇಶದ ಆಟೊಮೊಬೈಲ್‌ ಉದ್ಯಮ ಹಾಗೂ ಸಂಚಾರ ಕ್ಷೇತ್ರಕ್ಕೆ ಗುಜರಿ ನೀತಿಯಿಂದ ಹೊಸ ಅಸ್ಮಿತೆ ಸಿಗಲಿದೆ. ವಾಹನಗಳನ್ನು ಗುಜರಿಗೆ ಹಾಕಲು ಅಗತ್ಯವಿರುವ ಮೂಲಸೌಕರ್ಯಗಳ ಅಭಿವೃದ್ಧಿಪಡಿಸುವ ಕ್ಷೇತ್ರ ವಿಫುಲ ಅವಕಾಶಗಳನ್ನು ಒದಗಿಸುವುದು. ಈ ಉದ್ಯಮದಲ್ಲಿ ತೊಡಗಿಸಿಕೊಳ್ಳುವಂತೆ ಯುವಕರು ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಮನವಿ ಮಾಡುತ್ತೇನೆ’ ಎಂದೂ ಅವರು ಹೇಳಿದರು. 

Leave a Reply

Your email address will not be published. Required fields are marked *

error: Content is protected !!