ನಾಗರ ಪಂಚಮಿ, ಅಷ್ಠಮಿ, ಚೌತಿ ಹಬ್ಬಕ್ಕೆ ಅವಕಾಶ ನೀಡದಿರಲು ಚಿಂತನೆ- ಜಿಲ್ಲಾಧಿಕಾರಿ
ದ.ಕ, ಆಗಸ್ಟ್ 11: ಕೋವಿಡ್ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿರುವ ಹಿನ್ನೆಲೆ ಹಾಗೂ 3ನೇ ಅಲೆ ಭೀತಿಯಿಂದಾಗಿ ದ.ಕ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾರಂಭ ಹಬ್ಬ ಹರಿದಿನಗಳಿಗೆ ನಿರ್ಬಂಧ ಹೇರಲಾಗಿದೆ.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು, ಅಕ್ಟೋಬರ್ ತಿಂಗಳಲ್ಲಿ ನಡೆಯುವ ದಸರಾ ಹಬ್ಬದ ವರೆಗೂ ಜಿಲ್ಲೆಯಲ್ಲಿ ಸಾರ್ವಜನಿಕರ ಸಾಮೂಹಿಕ ಭಾಗವಹಿಸುವಿಕೆಯ ಯಾವುದೇ ಹಬ್ಬ ಹರಿದಿನಗಳ ಆಚರಣೆಗೆ ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.
ತುಳುನಾಡಿನ ಪ್ರಮುಖ ಆಚರಣೆಯಾದ ನಾಗರ ಪಂಚಮಿಯ ದಿನದಂದೂ ದೇವಾಲಯಗಳಲ್ಲಿ ಭಕ್ತರಿಂದ ವಿಶೇಷ ಪೂಜೆ, ಸೇವೆಗಳಿಗೆ ಅವಕಾಶವಿರುವುದಿಲ್ಲ. ಸಾಂಪ್ರದಾಯಿಕವಾಗಿ ಅರ್ಚಕರಿಂದ ನಡೆಯುವ ಧಾರ್ಮಿಕ ವಿಧಿಗಳು ಎಂದಿನ ರೀತಿ ನಡೆಸಬಹುದು. ಅಲ್ಲದೆ, ನಾಗಬನ ಹಾಗೂ ಕುಟುಂಬದ ಮನೆಗಳಲ್ಲಿ ಆಚರಿಸಲಾಗುವ ಪೂಜೆಗಳನ್ನು ಕೂಡ ಕೋವಿಡ್ ಮಾರ್ಗಸೂಚಿಯೊಂದಿಗೆ ಹೆಚ್ಚು ಜನ ಸೇರದಂತೆ ನಡೆಸಬೇಕು. ಸ್ಥಳೀಯ ಪಿಡಿಓಗಳ ಮೇಲ್ವಿಚಾರಣೆಯಲ್ಲಿ ಕಾರ್ಯಕ್ರಮ ನಡೆಸುವಂತೆ ಸೂಚಿಸಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಯನ್ನು ಕೂಡ ನಿಗದಿತ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಇಲ್ಲದೆ ನಡೆಸಲಾಗುತ್ತದೆ. ಇನ್ನು ಕೃಷ್ಣ ಜನ್ಮಾಷ್ಠಮಿ, ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲೂ ಸಾರ್ವಜನಿಕವಾಗಿ ಚಪ್ಪರ, ಶಾಮಿಯಾನ ಹಾಕಿ ಅಥವಾ ಮೆರವಣಿಗೆಯೊಂದಿಗೆ ನಡೆಸಲು ಅವಕಾಶ ನೀಡದಿರಲು
ಚಿಂತನೆ ಮಾಡಲಾಗಿದೆ ಅವರು ತಿಳಿಸಿದರು.
ಮುಖ್ಯಮಂತ್ರಿಯವರು ಶಾಲೆ ಕಾಲೇಜು ಆರಂಭದ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಉಳಿದ ಜಿಲ್ಲೆಗಳಲ್ಲಿ ಶಾಲಾ ಕಾಲೇಜು ಆರಂಭವಾದರೂ ದ.ಕ. ಜಿಲ್ಲೆ ಸೇರಿದಂತೆ ಕೋವಿಡ್ ಪಾಸಿಟಿವಿಟಿ ಹೆಚ್ಚಿರುವ ಜಿಲ್ಲೆಗಳಲ್ಲಿ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಈ ವಾರಂತ್ಯದಲ್ಲೂ ವೀಕೆಂಡ್ ಕರ್ಪ್ಯೂ ಇರುತ್ತದೆ.
ಜಿಲ್ಲೆಯಲ್ಲಿ ಮತ್ತೆ ಲಾಕ್ ಡೌನ್ ಜಾರಿ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಿರುವುದು ನಿಜ. ಅತ್ಯಂತ ಸುಸಜ್ಜಿತ ಆಧುನಿಕ ಆಸ್ಪತ್ರೆಗಳು, ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಿರುವ ಕಾಸರಗೋಡು ಸೇರಿದಂತೆ ಕೇರಳ ರಾಜ್ಯದ ಜತೆ ದ.ಕ. ಜಿಲ್ಲೆ ಗಡಿ ಹಂಚಿಕೊಂಡಿರುವುದರಿಂದ ಸಹಜವಾಗಿ ಪಾಸಿಟಿವಿಟಿ ದರದಲ್ಲಿ ಹೆಚ್ಚಳ ಕಂಡುಬರುತ್ತಿದೆ. ಆದರೆ ಜಿಲ್ಲೆಯಲ್ಲಿ ಪ್ರತಿನಿತ್ಯ ಕೋವಿಡ್ ತಪಾಸಣಾ ಸಂಖ್ಯೆಯೂ ಹೆಚ್ಚುತ್ತಿದೆ. ನಿನ್ನೆ ಒಂದು ದಿನದಲ್ಲಿ 9900 ಮಂದಿಗೆ ಕೋವಿಡ್ ತಪಾಸಣೆ ಮಾಡಲಾಗಿದೆ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಮತ್ತೆ ಲಾಕ್‌ಡೌನ್ ಮಾಡುವಂತಹ ಪರಿಸ್ಥಿತಿ ಇಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ರಾಜ್ಯ ಸರಕಾರದ ನಿರ್ದೇಶನದ ಮೇರೆಗೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ವಿಜಯ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.