ಎಟಿಎಂ ಕಾರ್ಡ್ ಹ್ಯಾಕಿಂಗ್ ಪ್ರಕರಣ: ಬ್ಯಾಂಕ್’ ನ ಸೇವಾ ನ್ಯೂನತೆ ಸಾಬೀತು-25 ಸಾವಿರ ರೂ. ಪರಿಹಾರಕ್ಕೆ ಆದೇಶ
ಉಡುಪಿ, ಆ.12: ಎಟಿಎಂ ಕಾರ್ಡ್ ಹ್ಯಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕನಿಗೆ 25 ಸಾವಿರ ರೂ. ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕ ನ್ಯಾಯಾಲಯ ಬ್ಯಾಂಕ್ ಆಫ್ ಬರೋಡಕ್ಕೆ ಆದೇಶ ನೀಡಿದೆ.
ಕಾರ್ಕಳ ತಾಲೂಕು ಬಜಗೋಳಿ ಮಾಳದ ನಿವೃತ್ತ ಬ್ಯಾಂಕ್ ನೌಕರ ಕೆ.ಸಿ.ಲಿಂಗಪ್ಪ (70) ಅವರ ಎ.ಟಿ.ಎಂ ಕಾರ್ಡ್ ಹ್ಯಾಕಿಂಗ್‌ಗೆ ಸಂಬಂಧಿಸಿದಂತೆ ಬ್ಯಾಂಕ್ ಆಫ್ ಬರೋಡ ಕಾರ್ಕಳ ಶಾಖೆ (ಈ ಹಿಂದಿನ ವಿಜಯಾಬ್ಯಾಂಕ್)ಯ ಸೇವಾ ನ್ಯೂನತೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ದೂರುದಾರರ ಉಳಿತಾಯ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡ 10,023.60 ರೂ.ವನ್ನು ಶೇ.10ರ ಬಡ್ಡಿ ಹಾಗೂ ಪರಿಹಾರ, ದಾವಾ ಖರ್ಚು ಮೊತ್ತವಾದ ರೂ.25,000ವನ್ನು ಒಂದು ತಿಂಗಳೊಳಗೆ ಪಾವತಿಸುವಂತೆ ಆದೇಶಿಸಿದೆ.
ಲಿಂಗಪ್ಪ ಅವರು ಹಿರಿಯ ನಾಗರಿಕರಾಗಿದ್ದು ಕಾರ್ಕಳದ ಬ್ಯಾಂಕ್ ಆಫ್ ಬರೋಡ ಶಾಖೆ (ಹಿಂದಿನ ವಿಜಯಾ ಬ್ಯಾಂಕ್)ಯಲ್ಲಿ ಎಸ್‌ಬಿ ಅಕೌಂಟ್ ಹೊಂದಿದ್ದರು. ಇವರುಕೊಲ್ಕತ್ತ, ಸಿಲಿಗುರಿ ಹಾಗೂ ಗ್ಯಾಂಗ್ ಟಕ್ ಪ್ರವಾಸದಲ್ಲಿದ್ದಾಗ 2019ರ ಸೆ.29ರಂದು ತನ್ನ ಮೊಬೈಲ್‌ಗೆ ಎಸ್ಎಂಎಸ್ ಒಂದು ಬಂದಿದ್ದು, ಅದರಲ್ಲಿ ತನ್ನ ಕಾರ್ಕಳ ಶಾಖೆಯಿಂದ 10,023.60 ರೂ. ವನ್ನು ಎಟಿಎಂ ಕಾರ್ಡ್ ಮೂಲಕ ತೆಗೆದಿರುವ ಸಂದೇಶ ಬಂದಿತ್ತು. ಈ ಬಗ್ಗೆ ಬ್ಯಾಂಕ್ ಶಾಖೆಗೆ ಮಾಹಿತಿಯನ್ನು ನೀಡಿ, ಅ.15ರಂದು ಕಾರ್ಕಳಕ್ಕೆ ಬಂದು ಶಾಖೆಯಲ್ಲಿ ಲಿಖಿತ ದೂರು ಸಲ್ಲಿಸಿದ್ದಾಗಿ ಲಿಂಗಪ್ಪ ಅವರು ಗ್ರಾಹಕ ನ್ಯಾಯಾಲಯದ ಮುಂದೆ ವಾದಿಸಿದ್ದರು.
ಅಲ್ಲದೆ ಬ್ಯಾಂಕ್ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಹಾಗೂ ತನ್ನ ಹಣವನ್ನು ಮರಳಿಸಲಿಲ್ಲ ಎಂದು ಅವರು ದೂರಿದ್ದರು. ಈ ಬಗ್ಗೆ ಎರಡೂ ಕಡೆಗಳ ವಾದ ಆಲಿಸಿದ ಶೋಭಾ ಸಿ.ವಿ. ಅಧ್ಯಕ್ಷತೆ ಹಾಗೂ ಸುಜಾತ ಬಿ.ಕೊರಳ್ಳಿ ಮತ್ತು ಶಾರದಮ್ಮ ಎಚ್.ಜಿ.ಇವರನ್ನೊಳಗೊಂಡ ಜಿಲ್ಲಾ ಗ್ರಾಹಕ ನ್ಯಾಯಾಲಯ, ದೂರುದಾರರಿಗೆ ಪರಿಹಾರ ನೀಡುವಂತೆ ಆದೇಶಿಸಿತು. ಬ್ಯಾಂಕ್ ಆಫ್ ಬರೋಡ, ದೂರುದಾರರಿಗೆ 2019ರ ಸೆ.29ರಿಂದ 2021ರ ಮಾ.28ರವರೆಗೆ ಶೇ.10ರ ಬಡ್ಡಿಯೊಂದಿಗೆ ಅಸಲು, ಪರಿಹಾರವಾಗಿ 15,000ರೂ. ಹಾಗೂ ದಾವೆಯ ಖರ್ಚು ವೆಚ್ಚಗಳಿಗೆ 10,000 ರೂ.ಗಳನ್ನು ಒಂದು ತಿಂಗಳೊಳಗೆ ಪಾವತಿಸುವಂತೆ ಜು.31ರಂದು ನೀಡಿದ ಆದೇಶದಲ್ಲಿ ತಿಳಿಸಿದೆ. ದೂರುದಾರರ ಪರವಾಗಿ ನ್ಯಾಯವಾದಿಗಳಾದ ಕಾರ್ಕಳದ ವಿವೇಕಾನಂದ ಮಲ್ಯ ಮತ್ತು ಕೋಟ ಅಶ್ವಿನಿ ಹೆಗ್ಡೆ ವಾದಿಸಿದ್ದರು.