ಮುಂದಿನ 5 ವರ್ಷಗಳಲ್ಲಿ ವಿಶ್ವದ ಅತ್ಯುತ್ತಮ ವಿವಿಗಳ ಪಟ್ಟಿಯಲ್ಲಿ ‘ಮಾಹೆ’ ಸ್ಥಾನ ಪಡೆಯಲು ಯೋಜನೆ ಸಿದ್ಧ

ಉಡುಪಿ ಆ.11(ಉಡುಪಿ ಟೈಮ್ಸ್ ವರದಿ): ವಿದ್ಯಾರ್ಥಿಗಳಿಗೆ ಮತ್ತೆ ಮಾಹೆ ಕ್ಯಾಂಪಸ್ ತೆರೆದುಕೊಳ್ಳುತ್ತಿದೆ. ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಮಾಹೆ ಕುಲಪತಿ ಲೆಫ್ಟಿನಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಅವರು, ಕೋವಿಡ್ ಸವಾಲುಗಳ ಮಧ್ಯೆಯೂ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಮುಕ್ತವಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಿದ್ದು, ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡಿರಬೇಕು ಹಾಗೂ 72 ಗಂಟೆ ಮೀರದ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಿ ಕ್ಯಾಂಪಸ್‌ನೊಳಗೆ ಪ್ರವೇಶ ಪಡೆಯಬೇಕು ಎಂಬ ನಿಯಮ ಪಾಲಿಸಲಾಗುತ್ತಿದೆ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ತರಗತಿಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ದೇಶದ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಮಾಹೆ ಮುಂಚೂಣಿಯಲ್ಲಿದ್ದು, ಮುಂದಿನ ಐದು ವರ್ಷಗಳಲ್ಲಿ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನಪಡೆದುಕೊಳ್ಳಲು ಯೋಜನೆ ಸಿದ್ಧಪಡಿಸಲಾಗಿದೆ. ಅದರ ಭಾಗವಾಗಿ 2021-22ನೇ ಸಾಲಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪಠ್ಯಕ್ರಮ ಹಾಗೂ ಹೊಸ ಕೋರ್ಸ್‌ಗಳನ್ನು ಮಾಹೆ ಅನುಷ್ಠಾನಕ್ಕೆ ತರುತ್ತಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಅಂಶಗಳನ್ನು ಅಳವಡಿಸಿಕೊಳ್ಳಲು 6 ತಿಂಗಳಿನಿಂದ ನಿರಂತರ ಶ್ರಮ ವಹಿಸಲಾಗಿದ್ದು, ವಿದ್ಯಾರ್ಥಿಗಳ ಕೌಶಲ, ಆಸಕ್ತಿ, ಅಭಿರುಚಿಗೆ ತಕ್ಕಂತಹ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಿಶ್ವದ 220 ವಿಶ್ವವಿದ್ಯಾಲಯಗೊಂದಿಗೆ ಮಾಹೆ ಅಕಾಡೆಮಿಕ್ ಸಹಭಾಗಿತ್ವ ಹೊಂದಿದೆ ಎಂದ ಅವರು, ಸಂಶೋಧನೆ, ಹೊಸತನಕ್ಕೆ ಒತ್ತು ನೀಡುತ್ತಿದೆ. ಕೋವಿಡ್ ಸಂದರ್ಭದಲ್ಲಿಯೂ ವರ್ಚುವಲ್ ವೇದಿಕೆಯ ಮೂಲಕ ಅಂತರರಾಷ್ಟ್ರೀಯ ಮಟ್ಟದ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ಮಾಡಿದೆ. 400ಕ್ಕೂ ಹೆಚ್ಚು ಸಂಶೋಧನಾ ಬರಹಗಳನ್ನು ಪ್ರಕಟಿಸಿದೆ ಎಂದರು.

ಮೂಲಕಸೌಕರ್ಯ ಅಭಿವೃದ್ಧಿಗೆ 1,000 ಕೋಟಿ ಬಂಡವಾಳ ಹೂಡುತ್ತಿದ್ದು, ಟಾಟಾ ಗ್ರೂಪ್‌ನೊಂದಿಗೆ ಒಪ್ಪಂದ ಮಾಡಿಕೊಂಡು ಮಾಹೆಯ ಉನ್ನತ ಶಿಕ್ಷಣ ಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ಕೋವಿಡ್‌ನಿಂದಾಗಿ ಬೋಧನಾ ಕ್ರಮವನ್ನು ಸಂಪೂರ್ಣವಾಗಿ ಡಿಜಿಟಲ್‌ಗೆ ರೂಪಾಂತರಗೊಳಿಸಲಾಗಿದೆ ಎಂದರು.

ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅವರು ಮಾತನಾಡಿ, ‘ಕೋವಿಡ್ ಕಾರಣದಿಂದ ಮಣಿಪಾಲ ಗ್ರೂಪ್‌ನ ಆದಾಯ ಗಣನೀಯವಾಗಿ ಇಳಿಕೆಯಾಗಿದ್ದರೂ ಕೂಡಾ ಸಿಬ್ಬಂದಿಗೆ ಪೂರ್ಣ ವೇತನ ನೀಡಲಾಗಿದೆ. ಜತೆಗೆ, ಈ ವರ್ಷ ವೇತನವನ್ನು ಹೆಚ್ಚಳ ಮಾಡಲಾಗಿದೆ’. ಜೊತೆಗೆ ಮಾಹೆ ವಿವಿಯೊಂದಿಗೆ ಟ್ಯಾಪ್ಮಿ ವಿಲೀನವಾಗಿದ್ದು, ಮುಂದಿನ ವರ್ಷದಿಂದ ಟ್ಯಾಪ್ಮಿ ವಿದ್ಯಾರ್ಥಿಗಳು ಮಾಹೆ ಮೂಲಕ ಪ್ರವೇಶ ಪಡೆದುಕೊಳ್ಳಬೇಕು. ಇದರಿಂದ ಟ್ಯಾಪ್ಮಿ ಕಾರ್ಯಕ್ಷೇತ್ರ ವಿಸ್ತಾರಗೊಂಡಂತಾಗಿದೆ.

ಜಿಲ್ಲಾಡಳಿತದ ಮನವಿಯ ಮೇರೆಗೆ ಕಳೆದ ವರ್ಷ ಉಡುಪಿಯ ಡಾ.ಟಿ.ಎಂ.ಎ ಪೈ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಯನ್ನಾಗಿ ಪರಿವರ್ತಿಸಲಾಗಿತ್ತು. ಸದ್ಯ ಎಂಐಟಿ ಹಾಸ್ಟೆಲ್ ಕಟ್ಟಡವನ್ನು ಕೋವಿಡ್ ಕೇರ್ ಕೇಂದ್ರವನ್ನಾಗಿ ಮಾಡಲಾಗಿದೆ. ಕೋವಿಡ್ ನಿಯಂತ್ರಿಸಲು ಜಿಲ್ಲಾಡಳಿತಕ್ಕೆ ಮಾಹೆ ಅಗತ್ಯ ಸಹಕಾರ ನೀಡುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಹೆ ರಿಜಿಸ್ಟ್ರಾರ್ ನಾರಾಯಣ ಸಭಾಯಿತ್, ಸಾರ್ವಜನಿಕ ಸಂಪರ್ಕ, ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮ ವಿಭಾಗದ ನಿರ್ದೇಶಕ ಎಸ್.ಪಿ.ಕಾರ್ ಇದ್ದರು.

Leave a Reply

Your email address will not be published. Required fields are marked *

error: Content is protected !!