ನಾನು ಯಾರನ್ನೂ ಬ್ಲ್ಯಾಕ್ ಮೇಲ್ ಮಾಡುವುದಿಲ್ಲ- ಸಚಿವ ಆನಂದ್ ಸಿಂಗ್

ಹೊಸಪೇಟೆ: ನಾನು ರಾಜ್ಯದ ಉನ್ನತ ರಾಜಕಾರಣಿಯೇನಲ್ಲ, ವಿಜಯನಗರ ಸಾಮ್ರಾಜ್ಯದೊಳಗೆ ಹೊಸಪೇಟೆಯಲ್ಲಿ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿ ಬಂದಿರುವ ರಾಜಕಾರಣಿಯಷ್ಟೆ, ನನ್ನ ತಪ್ಪಿದ್ದರೆ ತಿದ್ದಿಕೊಳ್ಳುವ ವ್ಯಕ್ತಿ ನಾನು, ಯಾರನ್ನೂ ಬ್ಲ್ಯಾಕ್ ಮೇಲ್ ಮಾಡುವ ಕೆಲಸ ಮಾಡುವ ತಂತ್ರ ನಾನು ಮಾಡುವುದಿಲ್ಲ  ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಇಂದು ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ನನಗೆ ಕೆಲವೊಂದು ನೋವುಗಳಿವೆ ಹೌದು, ಅದನ್ನು ನಾನು ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ ಬಗೆಹರಿಸಿಕೊಳ್ಳಲು ಬಯಸುತ್ತೇನೆ, ಇವತ್ತು ನಾನು ಯಾವುದೇ ರಾಜಕೀಯ ಹೇಳಿಕೆಗಳನ್ನು ನೀಡುವುದಿಲ್ಲ, ಹೇಳಿಕೆ ನೀಡದಂತೆ ನಮ್ಮ ನಾಯಕರು ಸಹ ಸೂಚನೆ ನೀಡಿದ್ದಾರೆ, ನೀವು ಮಾಧ್ಯಮದವರು ಊಹಿಸಿದ ರೀತಿಯಲ್ಲಿ ಇವತ್ತು ನನ್ನಿಂದ ಹೇಳಿಕೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ನನ್ನ ರಾಜಕೀಯ ಜೀವನ ಇದೇ ಹೊಸಪೇಟೆಯ ವೇಣುಗೋಪಾಲ ಸ್ವಾಮಿ ದೇವಸ್ಥಾನ ಬಳಿಯಿಂದ ಆರಂಭವಾಯಿತು. ನಮ್ಮ ನಾಯಕರ ಮೇಲೆ ನನಗೆ ನಂಬಿಕೆಯಿದೆ, ಆದರೆ ನಾಯಕರಿಗೆ ನನ್ನ ಮೇಲೆ ನಂಬಿಕೆಯಿದೆ ಎಂದು ಅನಿಸುತ್ತಿಲ್ಲ, ಬಿ ಎಸ್ ಯಡಿಯೂರಪ್ಪನವರು ಸಿಎಂ ಆಗಿದ್ದರೆ ನಾನು ಏನೂ ಕೇಳುತ್ತಿರಲಿಲ್ಲ ಎಂದರು.

ನಾನು ಇದೇ ವೇಣುಗೋಪಾಲ ಸನ್ನಿಧಿ ಬಳಿ ರಾಜಕೀಯ ಜೀವನ ಆರಂಭಿಸಿದ್ದು, ಇಲ್ಲಿಯೇ ಅಂತ್ಯವಾಗಲೂ ಬಹುದು, ಗೊತ್ತಿಲ್ಲ, ಮುಂದೆ ಏನಾಗಬಹುದು ಎಂದು, ರಾಜಕೀಯ ಜೀವನ ಪುನರಾರಂಭವಾಗಲೂಬಹುದು, ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ನಾಳೆ ಅಥವಾ ನಾಡಿದ್ದು ಭೇಟಿ ಮಾಡುತ್ತೇನೆ ಎಂದರು.

ಇಂದು ಹೊಸಪೇಟೆಯಲ್ಲಿ ವೇಣುಗೋಪಾಲ ಸ್ವಾಮಿಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಕುಟುಂಬಸ್ಥರೊಂದಿಗೆ ಭಾಗವಹಿಸಿ ಹೋಮ-ಹವನ ಮಾಡಿ ಮುಗಿಸಿದ ನಂತರ ಹೊರಗೆ ಬಂದು ಮಾಧ್ಯಮಗಳ ಜೊತೆ ಸಚಿವ ಆನಂದ್ ಸಿಂಗ್ ಸವಿವರವಾಗಿ ಮಾತನಾಡಿದರು.

ನಾನು ದೇವರ ಸನ್ನಿಧಿಯ ಮುಂದೆ ಕುಳಿತು ಪೂಜೆಯಲ್ಲಿ ಭಾಗಿಯಾಗಿದ್ದ ವೇಳೆ ಸತತ ಫೋನ್ ಕರೆಗಳು ಬರುತ್ತಿದ್ದವು. ದೇವರ ಮುಂದೆ ಶ್ರದ್ಧೆಯಿಂದ ಕುಳಿತು ಸಂಕಲ್ಪ ಮಾಡಿಕೊಂಡು ಇರುವಾಗ ಪೂಜೆಯಲ್ಲಿ ಭಾಗಿಯಾಗಿದ್ದಾಗ ಫೋನ್ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ, ಅದಕ್ಕೆ ಕ್ಷಮೆಯಿರಲಿ ಎಂದು ಕೇಳಿಕೊಂಡರು.

ಮುಖ್ಯಮಂತ್ರಿಗಳ ಭೇಟಿ: ಈ ಬೆಳವಣಿಗೆಗಳ ಬಗ್ಗೆ ಬಂದು ಮಾತನಾಡಿ ಎಂದು ಮುಖ್ಯಮಂತ್ರಿಗಳು ಕರೆದಿದ್ದು, ಇಂದು ಅಥವಾ ನಾಳೆ ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳನ್ನು ಮತ್ತು ಮಾಜಿ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡುತ್ತೇನೆ. ರಾಜಕೀಯವಾಗಿ ಇವತ್ತು ಇದಕ್ಕಿಂತ ಹೆಚ್ಚು ಹೇಳುವುದಿಲ್ಲ ಎಂದರು.

ಅಂತ್ಯವಾಗಲೂಬಹುದು, ಗೊತ್ತಿಲ್ಲ: ನಾನು ರಾಜಕೀಯವಾಗಿ ಇದೇ ವೇಣುಗೋಪಾಲಸ್ವಾಮಿ ಸನ್ನಿಧಿಯಿಂದ ನನ್ನ ರಾಜಕೀಯ ಜೀವನ ಆರಂಭಿಸಿದ್ದು, ಗೊತ್ತಿಲ್ಲ ಇಲ್ಲಿಯೇ ರಾಜಕೀಯ ಜೀವನ ಅಂತ್ಯವಾಗಲೂಬಹುದು, ಅಥವಾ ಪುನರಾರಂಭವಾಗಲೂಬಹುದು, ಆ ಶ್ರೀಕೃಷ್ಣ ಪರಮಾತ್ಮನ ಆಶೀರ್ವಾದವೊಂದಿದ್ದರೆ ಸಾಕು ಎಂದು ಮಾರ್ಮಿಕವಾಗಿ ನುಡಿದರು.

ಯಡಿಯೂರಪ್ಪನವರು ಕೇಳಿದ್ದನ್ನು ಕೊಟ್ಟಿದ್ದಾರೆ: ಮೊನ್ನೆ 8ನೇ ತಾರೀಖಿನಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಏನು ಹೇಳಿದ್ದೇನೋ, ಅದೇ ಮಾತಿಗೆ ಇಂದು, ಇನ್ನು ಮುಂದೆಯೂ ಬದ್ಧನಾಗಿರುತ್ತೇನೆ. ಅವರು ಏನು ಹೇಳಿದ್ದಾರೋ ಅದನ್ನು ಬಹಿರಂಗವಾಗಿ ಹೇಳುವುದಿಲ್ಲ. ಯಡಿಯೂರಪ್ಪ ಅವರ ಜೊತೆ ಕೂಡ ಚರ್ಚೆ ಮಾಡಿ ಬಂದಿದ್ದೇನೆ, ಅವರ ಮುಂದೆ ನಾನು ನನ್ನ ಬೇಡಿಕೆಗಳನ್ನು ಏನೂ ಹೇಳಲಿಲ್ಲ, ಏಕೆಂದರೆ ಅವರು ನಾನು ಕೇಳಿದ್ದನ್ನೆಲ್ಲಾ ಕೊಟ್ಟಿದ್ದಾರೆ. ಜಿಲ್ಲೆ, ಏತ ನೀರಾವರಿ ಖಾತೆ ಹೀಗೆ, ಅವರು ಮುಖ್ಯಮಂತ್ರಿಯಾಗಿದ್ದರೆ ಇಂದು ಈ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ನನ್ನ ವೈಯಕ್ತಿಕ ವಿಚಾರಗಳನ್ನು ಅವರ ಮುಂದೆ ನನ್ನ ಖಾತೆ ಬದಲಾವಣೆಗಳು ಮಾಡಿದಾಗಲೂ ಕೇಳಿರಲಿಲ್ಲ, ನಾನು ನಮ್ಮ ಜಿಲ್ಲೆಯ ಹೊಸಪೇಟೆಯ ಶಾಸಕನಷ್ಟೆ, ನನ್ನದು 15 ವರ್ಷಗಳ ರಾಜಕೀಯ ಜೀವನವಷ್ಟೆ ಎಂದರು.

ಭ್ರಮೆಯಿಂದ ಹೊರಬಂದಿದ್ದೇನೆ: ನನಗೆ ಎದುರಿನಿಂದ ಹೊಗಳುವುದು, ಹೊಗಳಿಕೆ ಬರುವುದಿಲ್ಲ, ಕೆಲವೊಮ್ಮೆ ಆ ಕಲೆ ಇರಬೇಕಾಗಿತ್ತೇನೋ ಎಂದು ಅನಿಸುತ್ತದೆ. ಆ ವಿಷಯದಲ್ಲಿ ನಾನು ಅಂಗವಿಕಲನಾಗುತ್ತೇನೆ. ಪಕ್ಷದಲ್ಲಿ ನನ್ನ ಜೊತೆ ನಾಯಕರು, ಸಹೋದ್ಯೋಗಿಗಳಿರುತ್ತಾರೆ ಎಂದು ಭ್ರಮೆಯಲ್ಲಿದ್ದು, ಇಂದು ಆ ಭ್ರಮೆಯಿಂದ ಹೊರಬಂದಿದ್ದೇನೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದರು. ಅಂದರೆ ಇಂದಿನ ಸುದ್ದಿಗೋಷ್ಠಿಯಲ್ಲಿ ಸೂಚ್ಯವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!